ಮೈಸೂರು : ನಾಡಹಬ್ಬ ಮೈಸೂರು ದಸರಾಗೆ (Dasara) ವಿದ್ಯುಕ್ತವಾಗಿ ತೆರೆ ಬಿದ್ದಿದೆ. ಕಳೆದ 10 ದಿನಗಳಿಂದ ವರ್ಣರಂಜಿತವಾಗಿ ನಡೆದ ಮೈಸೂರು ದಸರಾ ಪಂಜಿನ ಕವಾಯತಿನ ಮೂಲಕ ಸಾಂಪ್ರದಾಯಿಕವಾಗಿ ಅಂತ್ಯವಾಗಿದೆ. ಆದರೆ ಈ ಮಧ್ಯೆ ಚಿನ್ನದ ಅಂಬಾರಿ ಕೊಡುವುದು ತಡವಾಯಿತು ಎಂಬ ಆರೋಪ ಕೇಳಿಬಂದಿದೆ. ಇದೀಗ ಈ ವಿಚಾರಕ್ಕೆ ಸ್ವತಃ ಪ್ರಮೋದಾದೇವಿ ಒಡೆಯರ್ ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಇದು ಬೇಜವಾಬ್ದಾರಿ ಹೇಳಿಕೆ ಎಂದು ನಾನು ಹೇಳಲು ಬಯಸುತ್ತೇನೆ. ಏಕೆಂದರೆ ಅಂಬಾರಿಯನ್ನು ಮಧ್ಯಾಹ್ನ 2 ಗಂಟೆಯ ನಂತರ 2 ನಿಮಿಷಕ್ಕೆ ಹಸ್ತಾಂತರಿಸಲಾಗಿದೆ. ಈ ವಿಷಯ ನಮಗೂ ಆತಂಕ ಉಂಟು ಮಾಡಿತ್ತು ಎಂದು ಹೇಳಿದ್ದಾರೆ.
ಎಲ್ಲಾ ಕಾರ್ಯಕ್ರಮವನ್ನು ಸುಗಮವಾಗಿ ನಡೆಸಲು ನಾವು ಪ್ರಯತ್ನಿಸಿದರೂ ಮತ್ತು ಅಂಬಾರಿ ಸಿದ್ಧವಾಗಿದ್ದರೂ ಸಂಬಂಧಿಸಿದ ಸಿಬ್ಬಂದಿಗಳು ಸರಿಯಾಗಿ ಜನಸಂದಣಿ ನಿರ್ವಹಣೆ ಮಾಡದ ಮತ್ತು ಕೆಲವು ಸರ್ಕಾರಿ ಕಾರುಗಳನ್ನು ಮಾರ್ಗ ಮಧ್ಯೆದಲ್ಲಿ ನಿಲ್ಲಿಸಿದ್ದರಿಂದ ಅಂಬಾರಿ ಸ್ಥಳಾಂತರಿಸಲು ತೊಂದರೆ ಆಯಿತು.
ಅಂಬಾರಿ ಹಸ್ತಾಂತರದ ಸಮಯದ ಬಗ್ಗೆ ತಪ್ಪು ತಿಳುವಳಿಕೆಯನ್ನು ಸ್ಪಷ್ಟಪಡಿಸುವ ನಿಟ್ಟಿನಲ್ಲಿ ನಾನು ಈ ಹೇಳಿಕೆಯನ್ನು ನೀಡಿದ್ದೇನೆ. ಸಂಬಂಧಪಟ್ಟ ಎಲ್ಲರಿಗೂ ಅನಗತ್ಯ ಆತಂಕವನ್ನು ತಪ್ಪಿಸುವ ಉದ್ದೇಶ ಹೊರತು ಬೇರೆ ಯಾವುದೇ ಉದ್ದೇಶದಿಂದಲ್ಲ. ಮುಂದೆ ಈ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.