ಚಿತ್ರದುರ್ಗ : ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಪ್ರವಾದಿ ಮಹಮದ್ ಪೈಗಂಬರ್ರವರ ಬಗ್ಗೆ ಅವಹೇಳನವಾಗಿ ಮಾತನಾಡಿರುವ ಉತ್ತರಪ್ರದೇಶದ ಯತಿ ನರಸಿಂಗಾನಂದ ಸರಸ್ವತಿ ಸ್ವಾಮೀಜಿಯನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ತೋಳಿಗೆ ಕಪ್ಪು ಪಟ್ಟಿ ಧರಿಸಿ ಮುಸ್ಲಿಂರು ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿ, ದೇಶದ ಪ್ರಧಾನಿ, ಗೃಹ ಸಚಿವ, ಅಲ್ಪಸಂಖ್ಯಾತ ಕಲ್ಯಾಣ ಸಚಿವ ಹಾಗೂ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಶುಕ್ರವಾರ ಪ್ರಾರ್ಥನೆ ಮುಗಿಸಿಕೊಂಡು ಗಾಂಧಿವೃತ್ತದಿಂದ ಮೆರವಣಿಗೆ ಮೂಲಕ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿದ ಸಾವಿರಾರು ಮುಸ್ಲಿಂರು ಯತಿ ಸರಸಿಂಗಾನಂದ ಸರಸ್ವತಿ ಸ್ವಾಮೀಜಿ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಮುಸ್ಲಿಂ ಧರ್ಮಗುರು ಸೈಯದ್ ಅರಫಾಯಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಸರ್ವ ಜನಾಂಗದ ಶಾಂತಿಯ ತೋಟ ಭಾರತದಲ್ಲಿ ಹಿಂದೂ-ಮುಸಲ್ಮಾನರು ಸೌಹಾರ್ಧತೆಯಿಂದ ಬದುಕುತ್ತಿದ್ದು, ಶಾಂತಿಯನ್ನು ಕದಡುವುದಕ್ಕಾಗಿ ಪ್ರವಾದಿ ಮಹಮದ್ ಪೈಗಂಬರ್ರವರನ್ನು ಕೀಳಾಗಿ ಮಾತನಾಡಿರುವ ಯತಿ ನರಸಿಂಗಾನಂದ ಸರಸ್ವತಿ ಸ್ವಾಮೀಜಿಯನ್ನು ಕೂಡಲೆ ಬಂಧಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೇಶಾದ್ಯಂತ ಹೋರಾಟ ನಡೆಸಬೇಕಾಗುತ್ತದೆಂದು ಎಚ್ಚರಿಸಿದರು.
ಮತ್ತೊಬ್ಬ ಧರ್ಮಗುರು ಮೌಲಾನ ಗುಲಾಂ ಜಿಲಾನಿ ಮಾತನಾಡುತ್ತ ಸೂಫಿ ಸಂತರ ದೇಶ ಭಾರತದಲ್ಲಿ ಎಲ್ಲಾ ಧರ್ಮ, ಜಾತಿಯವರು ಅನ್ಯೋನ್ಯತೆಯಿಂದ ಬಾಳುತ್ತಿರುವುದನ್ನು ಸಹಿಸದ ಯತಿ ನರಸಿಂಗಾನಂದ ಸರಸ್ವತಿ ಸ್ವಾಮೀಜಿ ಅಖಂಡತೆಯನ್ನು ಹಾಳು ಮಾಡಲು ಹೊರಟಿದ್ದಾರೆ. ಕೋಮು ಸೌಹಾರ್ಧತೆಯನ್ನು ಕದಡಲು ನಾವುಗಳು ಬಿಡುವುದಿಲ್ಲ. ಪ್ರವಾದಿ ಮಹಮದ್ ಪೈಗಂಬರ್ರವರನ್ನು ಹಗುರವಾಗಿ ಮಾತನಾಡಿರುವ ನರಸಿಂಗಾನಂದ ಸರಸ್ವತಿ ಸ್ವಾಮಿಯನ್ನು ಬಂಧಿಸಿ ಉಗ್ರ ಶಿಕ್ಷೆ ವಿಧಿಸಿದಾಗ ಮಾತ್ರ ಇಂತಹ ಹೇಳಿಕೆಗಳು ನಿಲ್ಲತ್ತವೆ ಎಂದರು.
ಮುಸ್ಲಿಂ ಧರ್ಮಗುರು ಶಾಹಿದ್ರಜಾಫಕ್ರೆ ಆಲಂ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಪ್ರವಾದಿರವರ ಬಗ್ಗೆ ಯತಿ ನರಸಿಂಗಾನಂದ ಸರಸ್ವತಿ ಸ್ವಾಮೀಜಿ ಹೀನಾಯವಾಗಿ ಮಾತನಾಡಿರುವುದು ಸಮಸ್ತ ಮಸ್ಲಿಂ ಬಾಂಧವರ ಮನಸ್ಸಿಗೆ ನೋವಾಗಿದೆ. ಹಾಗಾಗಿ ಭಾರತ ಸರ್ಕಾರ ನರಸಿಂಗಾನಂದ ಸರಸ್ವತಿ ಸ್ವಾಮಿಯನ್ನು ಬಂಧಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಜಾಮಿಯಾ ಮಸೀದಿ ಅಧ್ಯಕ್ಷ ಸಾಧಿಕ್ಭಾಷ, ಕಾರ್ಯದರ್ಶಿ ಮುಹಿಬುಲ್ಲಾ, ಸುಲ್ತಾನಿ ಜಾಮಿಯಾ ಮಸ್ಜಿದ್ ಮರ್ಕಜ್ ಎ ಅಹ್ಲೆ ಅಧ್ಯಕ್ಷ ನ್ಯಾಯವಾದಿ ಮಹಮದ್ ಸಾಧಿಕ್ವುಲ್ಲಾ, ಜಿಲ್ಲಾ ವಕ್ಫ್ ಮಂಡಳಿ ಚೇರ್ಮನ್ ಎಂ.ಸಿ.ಓ.ಬಾಬು, ಮುಸ್ಲಿಂ ವಕೀಲರ ಸಂಘದ ಅಧ್ಯಕ್ಷ ಮಹಮದ್ ಸಮೀವುಲ್ಲಾ, ನ್ಯಾಯವಾದಿ ಜುಲ್ಫಿಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್, ಸೈಯದ್ ಮೊಹಿದ್ದಿನ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ, ಸೈಯದ್ ಇಸ್ಮಾಯಿಲ್, ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಹಮದ್ ಅಹಮದ್ಪಾಷ
ನೇಮತ್ವುಲ್ಲಾ, ಸೈಯದ್ ಅಫಾಖ್ ಅಹಮದ್, ನಗರಸಭೆ ಕೆಲವು ಸದಸ್ಯರು, ವಿವಿಧ ಮಸೀದಿಯ ಮುತುವಲ್ಲಿಗಳು, ಧರ್ಮಗುರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಯತಿ ನರಸಿಂಗಾನಂದ ಸರಸ್ವತಿ ಸ್ವಾಮೀಜಿ ವಿರುದ್ದ ಎಫ್.ಐ.ಆರ್.ದಾಖಲಿಸುವಂತೆ ನಗರ ಠಾಣೆ ಇನ್ಸ್ಪೆಕ್ಟರ್ಗೆ ಪ್ರತಿಭಟನಾಕಾರರು ದೂರು ನೀಡಿದರು.