ಬೆಂಗಳೂರು : ಮುಡಾ ಪ್ರಕರಣದಲ್ಲಿ ಎಲ್ಲಾ ಆರೋಪಿಗಳ ಪಾಸ್ಪೋರ್ಟ್ ವಶಕ್ಕೆ ಪಡೆಯುವಂತೆ ವಿಪಕ್ಷ ನಾಯಕ ಆರ್.ಅಶೋಕ್ ಇ.ಡಿ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮುಡಾದಲ್ಲಿ ನಡೆದಿರುವ ಬಹುಕೋಟಿ ಹಗರಣವನ್ನು ಜಾರಿ ನಿರ್ದೇಶನಾಲಯ ತನಿಖೆ ಮಾಡುತ್ತಿದೆ. ಇಡಿ ಅಧಿಕಾರಿಗಳು ಮೈಸೂರಿನ ಮುಡಾ ಕಚೇರಿಗೆ, ತಾಲ್ಲೂಕು ಕಚೇರಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇಡಿ ತನಿಖೆ ಇಷ್ಟೊಂದು ಚುರುಕುಗೊಂಡಿರುವ ಪರಿಸ್ಥಿತಿಯಲ್ಲಿ ಇಡೀ ಪ್ರಕರಣ ಮತ್ತೊಂದು ಮಜಲು ತಲುಪಿದಂತಾಗಿದೆ. ಅಧಿಕಾರದ ಅತ್ಯುನ್ನತ ಸ್ಥಾನದಲ್ಲಿರುವವರು, ಅವರ ಕುಟುಂಬ ಸದಸ್ಯರು, ಹಿರಿಯ ಅಧಿಕಾರಿಗಳು ಈ ಪ್ರಕರಣದಲ್ಲಿ ಆರೋಪಿಗಳಾಗಿರುವುದರಿಂದ, ಈ ಪ್ರಕರಣ ಎಷ್ಟು ಗಂಭೀರವೋ ಅಷ್ಟೇ ಸೂಕ್ಷ್ಮವೂ ಆಗಿದೆ ಎಂದಿದ್ದಾರೆ.
ಈ ನಿಟ್ಟಿನಲ್ಲಿ ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಯ ದೃಷ್ಟಿಯಿಂದ ಈ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು, ಆರೋಪಿಗಳು ಹಾಗೂ ಸಂಭವನೀಯ ಸಾಕ್ಷಿದಾರರ ಪಾಸ್ಪೋರ್ಟ್ಗಳನ್ನು ಈ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಇಡಿ ನಿರ್ದೇಶಕರು ಮತ್ತು ಡಿಜಿ-ಐಜಿಗೆ ಮನವಿ ಮಾಡುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.