ಆರೋಪಿಗಳು ತನಿಖಾ ಸಂಸ್ಥೆಗೆ ಮೊಬೈಲ್ ಫೋನ್ ಸಲ್ಲಿಸದೇ ಇರುವುದು ಅಸಹಕಾರ ಎಂದು ಕರೆಯಲಾಗದು ಎಂದು ಆಂಧ್ರ ಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.
ಮಾಜಿ ಸಂಸತ್ ಸದಸ್ಯ ಎನ್. ಸುರೇಶ್ ಬಾಬು ಮತ್ತು ಉದ್ಯಮಿ ಅವುತ್ತು ಶ್ರೀನಿವಾಸ ರೆಡ್ಡಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಆಂಧ್ರ ಪ್ರದೇಶ ಹೈಕೋರ್ಟ್ನ ನ್ಯಾ. ಡಾ. ವಿ.ಆರ್.ಕೆ. ಕೃಪಾಸಾಗರ ಅವರಿದ್ದ ಏಕಸದಸ್ಯ ನ್ಯಾಯಪೀಠ ಆದೇಶ ಹೊರಡಿಸಿದೆ.
ಆರೋಪಿಗಳಿಗೆ ಸಂವಿಧಾನದ ವಿಧಿ 20(3) ಸ್ವಯಂ ದೋಷಾರೋಣೆ ವಿರುದ್ಧದ ಹಕ್ಕು ಅಡಿಯಲ್ಲಿ ರಕ್ಷಣೆ ಒದಗಿಸಲಾಗಿದೆ. ಈ ಕಾರಣದಿಂದ ಗ್ಯಾಜೆಟ್ ಆನ್ಲೈನ್ ಖಾತೆಗಳ ಪಾಸ್ವರ್ಡ್ ನೀಡುವಂತೆ ಪೊಲೀಸರು ಆರೋಪಿಗಳಿಗೆ ಒತ್ತಾಯಿಸುವಂತಿಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಸದ್ರಿ ಪ್ರಕರಣದಲ್ಲಿ ಆರೋಪಿಗಳು ತಮ್ಮ ಮೊಬೈಲ್ ಫೋನ್ಗಳನ್ನು ತನಿಖೆ ಹಿನ್ನೆಲೆಯಲ್ಲಿ ಪೊಲೀಸರಿಗೆ ಒಪ್ಪಿಸಿರಲಿಲ್ಲ. ಹೀಗಾಗಿ ಅವರಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಅಭಿಯೋಜನೆಯ ಪರ ವಕೀಲರು ವಾದಿಸಿದ್ದರು. ಮೊಬೈಲ್ ಫೋನ್ ನೀಡದೇ ಇದ್ದ ಕಾರಣ ಪ್ರಕರಣದಲ್ಲಿ ವಾಟ್ಸ್ಯಾಪ್ ಸಂದೇಶಗಳನ್ನು ಸಂಗ್ರಹಿಸಲು ಮತ್ತು ಅಪರಾಧದ ಗೂಗಲ್ ಟೈಮ್ ಲೈನ್ ಸಂಗ್ರಹಿಸಲು ಪೊಲೀಸರಿಗೆ ಆಗಲಿಲ್ಲ ಎಂದು ವಾದಿಸಲಾಗಿತ್ತು.
ಆದರೆ, ಫೋನ್ ವಶಕ್ಕೆ ಪಡೆದುಕೊಳ್ಳಲಾಗಿಲ್ಲ ಎಂಬ ಕಾರಣಕ್ಕೆ ಅದನ್ನು ಹೊರತುಪಡಿಸಿ ಉಳಿದ ಎಲೆಕ್ಟ್ರಾನಿಕ್ ಸಾಕ್ಷ್ಯ ಪಡೆಯಲು ಹಿಂಜರಿಯುವಂತಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಅರ್ಜಿದಾರರ ಉದ್ಯೋಗ, ನಿವಾಸ ಮತ್ತು ಇಷ್ಟು ವರ್ಷದಲ್ಲಿ ತನಿಖೆಗೆ ಲಭ್ಯ ಇರುವುದನ್ನು ಗಮನಿಸಿದರೆ, ಅವರು ಪೊಲೀಸರ ವಿಚಾರಣೆಯಿಂದ ತಪ್ಪಿಸುವ ಸಾಧ್ಯತೆ ಇಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ.