ನವದೆಹಲಿ : ಭಾರತ ಮತ್ತು ಚೀನಾ ಪೂರ್ವ ಲಡಾಖ್‌ನ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಉಭಯ ದೇಶಗಳ ಸೇನೆ ಗಸ್ತು ತಿರುಗುವುದನ್ನು ಪುನರಾರಂಭಿಸುವ ಒಪ್ಪಂದಕ್ಕೆ ಬಂದಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಗಡಿಯಲ್ಲಿ ಉಭಯ ದೇಶಗಳ ಗಸ್ತು ತಿರುಗುವ ವಿಚಾರವಾಗಿ ಕಳೆದ ಹಲವಾರು ವಾರಗಳಿಂದ ಚರ್ಚೆ ನಡೆಯುತ್ತಲೇ ಇದೆ. ಇದರ ಪರಿಣಾಮವಾಗಿ, ಭಾರತ-ಚೀನಾ ಗಡಿ ಪ್ರದೇಶದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಗಸ್ತು ತಿರುಗಲು ಅಸ್ತು ಎನ್ನಲಾಗಿದೆ.
ಈ ಕುರಿತು ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು, ಡೆಪ್ಸಾಂಗ್ ಪ್ಲೇನ್ಸ್ ಮತ್ತು ಡೆಮ್ಚೋಕ್ ಎಲ್‌ಎಸಿ ಉದ್ದಕ್ಕೂ ಇರುವ ಗಸ್ತು ತಿರುಗುವಿಕೆ ಪುನರಾರಂಭಗೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಚೀನಾ ನಡುವೆ ರಾಜತಾಂತ್ರಿಕ ಮತ್ತು ಮಿಲಿಟರಿ ಚರ್ಚೆಗಳು ನಡೆಯುತ್ತಿವೆ. ಈ ಮೂಲಕ 2020 ರಲ್ಲಿ ಈ ಪ್ರದೇಶಗಳಲ್ಲಿ ಉದ್ಭವಿಸಿದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗಿದೆ ಎಂದು ತಿಳಿಸಿದ್ದಾರೆ.