ಢಾಕಾ: ಮೀಸಲಾತಿ ವಿರೋಧಿ ವಿದ್ಯಾರ್ಥಿ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಬಾಂಗ್ಲಾದೇಶದಲ್ಲಿ ಇದೀಗ ಮತ್ತೊಂದು ಹಂತದ ಹಿಂಸಾತ್ಮಕ ಪ್ರತಿಭಟನೆಗಳು ಆರಂಭವಾಗಿವೆ.
ತಡರಾತ್ರಿ ಪ್ರತಿಭಟನಾಕಾರರು ಬಂಗಾ ಭವನಕ್ಕೆ ಮುತ್ತಿಗೆ ಹಾಕಿದ್ದು ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಪ್ರತಿಭಟನಾಕಾರರು ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಾ ಮುಂದೆ ಸಾಗುತ್ತಿದ್ದು ಈ ವೇಳೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಅವರನ್ನು ತಡೆದರು.
ಕೆಲವು ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ತಳ್ಳಿ ಮುಂದೆ ಸಾಗಲು ಯತ್ನಿಸಿದ್ದು ಕೂಡಲೇ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿ ಅವರನ್ನು ತಡೆದಿದ್ದಾರೆ. ಮಾಹಿತಿ ಪ್ರಕಾರ, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ನಂತರ ಪ್ರತಿಭಟನಾಕಾರರು ಹಿಂದೆ ಸರಿದಿದರು. ಲಾಠಿ ಚಾರ್ಜ್ ನಿಂದಾಗಿ ಕೆಲವು ಪ್ರತಿಭಟನಾಕಾರರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುಗಳಿಗೆ ಢಾಕಾ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಮುಂದುವರಿದಿದೆ. ಬಾಂಗ್ಲಾ ದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರ ವಿರುದ್ಧ ಇದೀಗ ಮೀಸಲಾತಿ ವಿರೋಧಿ ವಿದ್ಯಾರ್ಥಿ ಹೋರಾಟಗಾರರು ರೊಚ್ಚಿಗೆದ್ದಿದ್ದಾರೆ. ಬಾಂಗ್ಲಾ ದೇಶದ ಅಧ್ಯಕ್ಷೀಯ ಕಚೇರಿಯಾದ ಬಾಂಗಾ ಭಬನ್‌ಗೆ ಲಗ್ಗೆ ಇಟ್ಟಿರುವ ಪ್ರತಿಭಟನಾಕಾರರು, ಅಧ್ಯಕ್ಷೀಯ ಅರಮನೆಯನ್ನು ಸುತ್ತುವರೆದಿದ್ದು, ಬಾಂಗ್ಲಾ ಅಧ್ಯಕ್ಷರಿಗೆ ದಿಗ್ಬಂಧನ ವಿಧಿಸಿದ್ದಾರೆ.