ಚಿತ್ರದುರ್ಗ : ಸುಪ್ರೀಂಕೋರ್ಟ್ ಆದೇಶದಂತೆ ಒಳ ಮೀಸಲಾತಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಜಿಲ್ಲಾ ಮಾದಿಗರ ವಕೀಲರ ಬಳಗದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.
ನ್ಯಾಯಾಲಯದ ಆವರಣದಿಂದ ಮೆರವಣಿಗೆ ಮೂಲಕ ಆಗಮಿಸಿದ ವಕೀಲರು ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಒಳ ಮೀಸಲಾತಿ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಒಳ ಮೀಸಲಾತಿ ಜಾರಿಗಾಗಿ ಕಳೆದ ಮೂವತ್ತು ವರ್ಷಗಳಿಂದಲೂ ಸತತ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿರುವುದು ಹೋರಾಟಕ್ಕೆ ಸಿಕ್ಕ ಫಲ. ಸಂವಿಧಾನದ ಪರಿಚ್ಚೇದ 15(4) 16(4) 341 ರಡಿಯನ್ವಯ ಜಾತಿ ಸಂಖ್ಯೆಗನುಗುಣವಾಗಿ ಒಳ ಮೀಸಲಾತಿಯನ್ನು ನಿಗಧಿಪಡಿಸಬೇಕೆಂಬ ಸಂವಿಧಾನದ ಆಶಯದಂತೆ ಸುಪ್ರೀಂಕೋರ್ಟ್ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯಗಳಿಗಿದೆಯೆಂದು ತೀರ್ಪು ನೀಡಿದ್ದರೂ ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರುವಲ್ಲಿ ತಡ ಮಾಡುತ್ತ. ತೀರ್ಪಿನ ವಿರುದ್ದ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿರುವುದನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣವೆ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಪ್ರತಿಭಟನಾನಿರತ ವಕೀಲರು ಒತ್ತಾಯಿಸಿದರು.
ವಕೀಲರುಗಳಾದ ಬೀಸ್ನಳ್ಳಿ ಜಯಣ್ಣ, ಶರಣಪ್ಪ, ಜಿ.ಕೆ.ಮಲ್ಲಿಕಾರ್ಜುನಸ್ವಾಮಿ, ಟಿ.ಹನುಮಂತಪ್ಪ, ಎಸ್.ವಿಜಯಕುಮಾರ್, ಎಂ.ಕೆ.ಲೋಕೇಶ್, ಎಸ್.ಕೆ.ಸುರೇಶ್ಬಂಜಗೆರೆ ಎಸ್.ದಯಾನಂದ್, ಕೆ.ವಿಶ್ವಾನಂದ ವದ್ದಿಕೆರೆ, ಎಂ.ರಮೇಶ್, ರಘು, ನಾಗರಾಜ್, ಮಲ್ಲಿಕಾರ್ಜುನ್, ತಕ್ಷಶಿಲ, ನೇತ್ರಾವತಿ, ಐಶ್ವರ್ಯ, ರಾಜಣ್ಣ, ಶಿಲ್ಪ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.