ಮಳೆಹಾನಿ ಬೆಳೆ ಪರಿಹಾರ ಮೊತ್ತ ಹೆಚ್ಚಳಕ್ಕೆ ಒತ್ತಾಯ  : ಸಚಿವ ಕೃಷ್ಣ ಭೈರೇಗೌಡ

 

 ಚಿತ್ರದುರ್ಗ: ನೈಸರ್ಗಿಕ ವಿಕೋಪಗಳ ಪರಿಹಾರ ವಿತರಣೆ ಮಾರ್ಗಸೂಚಿಗಳನ್ನು ಪರಿಷ್ಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದರ ಜೊತೆಗೆ ಬೆಳೆ ಪರಿಹಾರ ಮೊತ್ತದ ಹೆಚ್ಚಳಕ್ಕೂ ರಾಜ್ಯ ಸರ್ಕಾರದಿಂದ ಒತ್ತಡ ಹೇರಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಹಾನಿಗೊಳಗಾದ ಬೆಳೆ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ ಕೃಷ್ಣ ಭೈರೇಗೌಡ, ಬೆಳಗಟ್ಟ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

Advertisement

ಈ ಕುರಿತು ದೆಹಲಿಯಲ್ಲಿ ಪ್ರಧಾನ ಮಂತ್ರಿಗಳನ್ನು ಮುಖ್ಯಮಂತ್ರಿಗಳೊಂದಿಗೆ ಭೇಟಿ ಮಾಡಿ ಬೆಳೆ ಪರಿಹಾರ ಮೊತ್ತ ಹೆಚ್ಚಳಕ್ಕೆ ಒತ್ತಾಯಿಸಲಾಗಿದೆ. ಸದ್ಯ ಹಳೆಯ ಕಾಲದ ಬೆಲೆಗಳನ್ನು ಪರಿಗಣಿಸಿ ಬೆಳೆ ಪರಿಹಾರ ಮೊತ್ತ ನೀಡಲಾಗುತ್ತಿದೆ. ಇದರಿಂದ ರೈತರಿಗೆ ನ್ಯಾಯ ಒದಗಿಸಲು ಆಗುವುದಿಲ್ಲ. ಆದ್ದರಿಂದ ಬೆಳೆ ಪರಿಹಾರದ ಮೊತ್ತವನ್ನು ಪರಿಷ್ಕøರಿಸುವಂತೆ ಕೇಳಲಾಗಿದೆ ಎಂದರು.

ಕೇಂದ್ರದಲಿ ಎನ್.ಡಿ.ಎ ಮೈತ್ರಿಕೂಟ ಅಧಿಕಾರದಲ್ಲಿದೆ. ರಾಜ್ಯದ ವಿಪಕ್ಷ ನಾಯಕರು ಬೆಳೆ ಪರಿಹಾರ ಹೆಚ್ಚಳದ ಕುರಿತು ಪ್ರಧಾನ ಮಂತ್ರಿಗಳಿಗೊಂದಿಗೆ ಸಮಾಲೋಚಿಸುವಂತೆ ರಾಜ್ಯದ ಜನರ ಪರವಾಗಿ ಅವರಿಗೂ ಮನವಿ ಮಾಡುವುದಾಗಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ದಾವಣಗೆರೆ, ಚಿತ್ರದುರ್ಗ, ವಿಜಯನಗರ, ತುಮಕೂರು ಸೇರಿದಂತೆ ಮಧ್ಯ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಮಳೆಯಾಗಿದೆ. ಈ ಬಾರಿ ಚಿತ್ರದುರ್ಗ ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ 170 ಮಿ.ಮೀ ಆಗಿದ್ದು, ಇದು ಸರಾಸರಿ ವಾಡಿಕೆ ಮಳೆಗಿಂತಲ್ಲೂ 70 ಮಿ.ಮೀ ಹೆಚ್ಚಾಗಿದೆ. ಇದರಿಂದಾಗಿ ಬಹಳಷ್ಟು ಕಡೆ ಬೆಳೆ ಹಾನಿ ಉಂಟಾಗಿದೆ. ಹೀಗಾಗಿ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಜಂಟಿಯಾಗಿ ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ.

ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ 56,900 ಹೆಕ್ಟೇರ್ ಬೆಳೆ ಹಾನಿಯಾಗಿರುವ ಕುರಿತು ಪ್ರಾಥಮಿಕ ಅಂದಾಜು ಮಾಹಿತಿ ಇದೆ. ಮುಂದಿನ ಮೂರಾಲ್ಕು ದಿನದಲ್ಲಿ ಜಂಟಿ ಸಮೀಕ್ಷೆ ಪೂರ್ಣಗೊಳಿಸಿದ ನಂತರ ನಿಖರ ಮಾಹಿತಿ ದೊರಯಲಿದೆ. ಇದಾದ ಬಳಿಕ ಕೂಡಲೇ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪರಿಹಾರ ನೀಡಲು ಬೇಕಾದಷ್ಟು ಅನುದಾನ ಲಭ್ಯವಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ರೂ.15.50 ಕೋಟಿ ಹಣ ಜಿಲ್ಲಾಧಿಕಾರಿಗಳ ಬಳಿ ಇದೆ. ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಿಗೂ ಸೇರಿ ರೂ.666 ಕೋಟಿ ಹಣ ನೀಡಲಾಗಿದ್ದು, ತಕ್ಷಣ ಪರಿಹಾರ ನೀಡಲಾಗುವುದು.

ಹಿಂಗಾರು ಮಳೆಯ ವೇಳೆ ಸಿಡಿಲು, ಮನೆ ಕುಸಿತ ಹಾಗೂ ಮಳೆಯ ಪ್ರವಾಹದಲ್ಲಿ ಕೊಚ್ಚಿಹೋಗಿ ರಾಜ್ಯದ್ಯಂತ 21 ಜನ ಅಸುನೀಗಿದ್ದಾರೆ. ಇಲ್ಲಿಯವರೆಗೂ ಮುಂಗಾರು ಹಾಗೂ ಹಿಂಗಾರು ಸೇರಿ ಒಟ್ಟಾರೆ 115 ಜನರ ಪ್ರಾಣಹಾನಿಯಾಗಿದ್ದು, ಇವರೆಲ್ಲರಿಗೂ ಪರಿಹಾರ ನೀಡಲಾಗಿದೆ.

ಹಿಂಗಾರು ಹಂಗಾಮಿನಲ್ಲಿ 122 ಮನೆಗೆ ಹಾನಿಯಾಗಿದ್ದು, ಪರಿಹಾರ ನೀಡಲು ನಿರ್ದೇಶನ ನೀಡಲಾಗಿದೆ. ಅ.26 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಅತಿವೃಷ್ಠಿ ಉಂಟಾಗಿರುವ 10 ಜಿಲ್ಲೆಗಳ ಅಧಿಕಾರಿಗಳ ಪರಿಶೀಲನಾ ಸಭೆ ಕರೆಯಲಾಗಿದೆ. ಸರ್ಕಾರದಿಂದ ಅಗತ್ಯ ನೆರವು ಸಹ ನೀಡಲಾಗುವುದು. ಬೆಳೆ ಹಾನಿ ಸಮೀಕ್ಷೆ ಕಾರ್ಯ ಚುರುಕಾಗಿ ನಡೆಯುತ್ತಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಮುಂಗಾರು ಹಂಗಾಮಿನಲ್ಲಿ ಸುಮಾರು ರೂ.100 ಕೋಟಿಯಷ್ಟು ಬೆಳೆ ಹಾಗೂ ಮನೆ ಹಾನಿ ಪರಿಹಾರ ನೀಡಲಾಗಿದೆ. ಉಳಿದ ರೂ.100 ಕೋಟಿ ಪರಿಹಾರ ವಿತರಣೆಯು ಚಾಲ್ತಿಯಲ್ಲಿದೆ. ಮಧ್ಯ ಕರ್ನಾಟಕ ಪದೇ ಪದೇ ಬರಗಾಲಕ್ಕೆ ತುತ್ತಾಗುತ್ತಿವೆ. ಭದ್ರಾ ಯೋಜನೆಯಲ್ಲಿ ರಾಜ್ಯಕ್ಕೆ ಹೆಚ್ಚಿನ ನೀರು ಲಭ್ಯವಿದೆ. ಹಾಗಾಗಿ ಈ ಭಾಗದ ರೈತರ ಅಭಿವೃದ್ಧಿಗಾಗಿ ಭದ್ರಾ ಮೇಲ್ದಂಡೆ ಯೋಜನೆ ರೂಪಿಸಲಾಗಿದೆ.

ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ರೂ.5300 ಕೋಟಿ ಹಣ ಬರುವುದು ಬಾಕಿಯಿದೆ. ಇಲ್ಲಿಯವರೆಗೂ ನಯಾಪೈಸೆ ಅನುದಾನ ಬಂದಿಲ್ಲ. ವಿರೋಧ ಪಕ್ಷದ ನಾಯಕರು ಕೂಡಲೇ ಕೇಂದ್ರಕ್ಕೆ ಒತ್ತಾಯಿಸಿ ಹಣ ತಂದರೆ, ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮ ಜಾರಿ ಮಾಡಲಾಗುವುದು.  ಗ್ಯಾರೆಂಟಿ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪತ್ತಿವೆ.

ಇದರಲ್ಲಿ ಯಾವುದೇ ಕಮಿಷನ್, ಪರ್ಸಂಟೇಜ್ ನೀಡಬೇಕಿಲ್ಲ. ಸಾರ್ವಜನಿಕರು ಯೋಜನೆಯ ಲಾಭ ಪಡೆಯಲು ಯಾರ ಮನೆಗೂ ಹೋಗಿ ಸಲ್ಯೂಟ್ ಹೊಡೆಯುವ ಅವಶ್ಯಕತೆಯಿಲ್ಲ. ನೇರವಾಗಿ ಯೋಜನೆಗಳು ಜನರಿಗೆ ತಲುಪುತ್ತಿವೆ. ವಿಶ್ವಕ್ಕೆ ಮಾದರಿ ಎನಿಸಿದ ಯೋಜನೆಗಳನ್ನು ಜಾರಿ ಮಾಡಿದ ಸಮಾಧಾನ ನಮಗಿದೆ. ಇನ್ನೂ ಮೂರುವರೆ ವರ್ಷದಲ್ಲೇ ಬೇರೆ ಬೇರೆ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಮಾಡಿ, ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಪಡುವುದಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement