ಚಿತ್ರದುರ್ಗ : ದೇಶದ ಐಕ್ಯತೆ ಮತ್ತು ಏಕತೆಗಾಗಿ ಹೋರಾಡಿದ ಸರ್ದಾರ್ ವಲ್ಲಭ ಭಾಯಿ ಪಟೇಲ್ರವರಲ್ಲಿದ್ದ ದೇಶಭಕ್ತಿಯನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ಜಿಲ್ಲಾ ಬಿಜೆಪಿ. ಮಾಜಿ ಅಧ್ಯಕ್ಷ ಟಿ.ಜಿ.ನರೇಂದ್ರನಾಥ್ ತಿಳಿಸಿದರು.
ಭಾರತೀಯ ಜನತಾಪಾರ್ಟಿಯಿಂದ ಮಂಗಳವಾರ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಹೊರಟು ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿದ ಏಕತೆಗಾಗಿ ಓಟದಲ್ಲಿ ಭಾಗವಹಿಸಿ ಮಾತನಾಡಿದರು.
563 ಸಂಸ್ಥಾನಗಳನ್ನು ಒಗ್ಗೂಡಿಸಿ ಏಕತೆ, ಸಾರ್ವಭೌಮತೆಯನ್ನು ಮೆರೆದ ದಿಟ್ಟ ವ್ಯಕ್ತಿತ್ವದ ಸರ್ದಾರ್ ವಲ್ಲಭಭಾಯಿ ಪಟೇಲ್ ಹೈದರಾಬಾದ್ ವಿಮೋಚನೆಯ ಕಷ್ಟದ ದಿನಗಳಲ್ಲಿ ಸೈನ್ಯ ಕಟ್ಟಿಕೊಂಡು ಬ್ರಿಟೀಷರ ವಿರುದ್ದ ಹೋರಾಡಿ ಬೇರೆ ಬೇರೆ ಭಾಷೆ, ಜಾತಿ, ಧರ್ಮವನ್ನು ಒಗ್ಗೂಡಿಸಿ ದೇಶದ ಅಖಂಡತೆಯನ್ನು ಎತ್ತಿಹಿಡಿದ ಹೆಗ್ಗಳಿಕೆ ಅವರದು ಎಂದು ಸ್ಮರಿಸಿದರು.
ಪ್ರಧಾನ ಮಂತ್ರಿಯಾಗುವ ಅವಕಾಶ ಸಿಕ್ಕಿದ್ದನ್ನು ತ್ಯಾಗ ಮಾಡಿ ದೇಶಭಕ್ತಿ ಮೈಗೂಡಿಸಿಕೊಂಡ ಸರ್ದಾರ್ ವಲ್ಲಭಭಾಯಿ ಪಟೇಲ್ರವರ ಆಚಾರ-ವಿಚಾರಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸಬೇಕಿದೆ ಎಂದು ಹೇಳಿದರು.
ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಸಿದ್ದಾಪುರ, ಸಂಪತ್ಕುಮಾರ್, ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಜಿಲ್ಲಾ ವಕ್ತಾರ ನಾಗರಾಜ್ಬೇದ್ರೆ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್, ಲೋಕೇಶ್, ಕಿರಣ್ ಇನ್ನು ಮುಂತಾದವರು ಏಕತಾ ಓಟದಲ್ಲಿ ಪಾಲ್ಗೊಂಡಿದ್ದರು