ನವದೆಹಲಿ : ದೇಶದ ಆರ್ಥಿಕತೆಯು ಹಲವು ವರ್ಷಗಳಿಂದ ಅತ್ಯಂತ ಅನಿಶ್ಚಿತ ಹಾಗೂ ಜಟಿಲ ಸ್ಥಿತಿಯಲ್ಲಿದೆ. ಬದಲಾಗದ ವೇತನ, ಹಣದುಬ್ಬರ ಮತ್ತು ಅಸಮಾನತೆಯು ಬಳಕೆಯ ಸಾಮರ್ಥ್ಯವನ್ನು ಕುಗ್ಗಿಸುತ್ತಿದೆ ಎಂದು ಕಾಂಗ್ರೆಸ್ ಹೇಳಿತ್ತು.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಈಗ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಮುಂದಿನ ದಿನಗಳಲ್ಲಿ ದೇಶದ ಬೆಳವಣಿಗೆ ಉಸಿರುಗಟ್ಟಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ಮೂರು ದಶಕದ ದೇಶದ ಬೆಳವಣಿಗೆ ಹಾದಿಯಲ್ಲಿ, ಬಳಕೆಯ ಸಾಮರ್ಥ್ಯ ವೃದ್ಧಿಯು ಮುಖ್ಯ ವಿಚಾರವಾಗಿದೆ. ಅದು ಕೋಟ್ಯಂತರ ಕುಟುಂಬಗಳನ್ನು ಬಡತನದಿಂದ ಹೊರತಂದು ಮಧ್ಯಮವರ್ಗಕ್ಕೆ ನಿಲ್ಲಿಸಿದೆ. ಅಗತ್ಯ ಸಾಮಗ್ರಿಗಳನ್ನು ಖರೀದಿಸುವ ಸಾಮರ್ಥ್ಯ ಒದಗಿಸಿದೆ. ಅದು ಆರ್ಥಿಕತೆ ಅಭಿವೃದ್ಧಿ ಹೊಂದುತ್ತಿರುವುದರ ಸಂಕೇತವಾಗಿದ್ದು, ಅದರ ಪ್ರಯೋಜನವು ಎಲ್ಲರಿಗೂ ಹಂಚಿಕೆಯಾಗಲಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಕಳೆದ 10 ವರ್ಷಗಳಲ್ಲಿ ದೇಶದ ಬಳಕೆಯ ಸಾಮರ್ಥ್ಯವು ಹಿಮ್ಮುಖವಾಗಿದೆ. ದೇಶದ ಆರ್ಥಿಕತೆಗೆ ದೊಡ್ಡ ಹೊಡೆತವಾಗಿ ಬದಲಾಗಿದೆ. ವೇತನ ನಿಶ್ಚಲತೆ, ಅತಿಯಾದ ಹಣದುಬ್ಬರ ಮತ್ತು ಅಸಮಾನತೆಯೇ ಇದಕ್ಕೆ ಕಾರಣ. ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ ‘ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆ (ಎಎಸ್‌ಐ) 2022-2023’ ವರದಿ ಸೇರಿದಂತೆ ಹಲವು ಪೂರಕ ಅಂಕಿ-ಅಂಶಗಳನ್ನು ಹಂಚಿಕೊಂಡಿರುವ ಅವರು, ಈಗಿನ ಕೊಳ್ಳುವ ಸಾಮರ್ಥ್ಯವು 10 ವರ್ಷಗಳ ಹಿಂದಿನ ಮಟ್ಟಕ್ಕಿಂತಲೂ ಕುಸಿದಿರುವುದು ಸ್ಪಷ್ಟವಾಗಿದೆ ಎಂದು ಬರೆದುಕೊಂಡಿದ್ದಾರೆ.