ಶಂಕರಘಟ್ಟ: ಉಕ್ಕಿನ ಮನುಷ್ಯ ಎಂಬ ಬಿರುದಿಗೆ ಪಾತ್ರವಾಗಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಭಾರತವನ್ನು ಗಣರಾಜ್ಯವಾಗಿಸಿದವರು. ರಾಜಪ್ರಭುತ್ವದಿಂದ ಬಿಡುಗಡೆ ಮಾಡಿ, ಪ್ರಜಾಪ್ರಭುತ್ವವನ್ನು ಜಾರಿಗೊಳಿಸಲು ಶ್ರಮಿಸಿದವರು ಎಂದು ಕುಲಪತಿ ಪ್ರೊ.ಶರತ್ ಅನಂತ್ ಮೂರ್ತಿ ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರರು. ಸ್ವತಂತ್ರ ಭಾರತದ ಪ್ರಪ್ರಥಮ ಉಪಪ್ರಧಾನಮಂತ್ರಿ, ಗೃಹ ಸಚಿವರು. ರಾಷ್ಟ್ರದ ಸಮಗ್ರತೆಗಾಗಿ, ಐಕ್ಯತೆಗಾಗಿ ಮತ್ತು ಭದ್ರತೆಗಾಗಿ ಹೋರಾಡಿದ ಧೀಮಂತ ವ್ಯಕ್ತಿ. ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿವಸ ಎಂದು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಎಂದರು.
ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಏಕತಾ ದಿವಸದ ಆಚರಣೆ ಕಾರ್ಯಕ್ರಮದಲ್ಲಿ ಪ್ರತಿಜ್ಞೆಯನ್ನು ಬೋಧಿಸಿ, ಮಾತಾಡಿದರು.
ಪಟೇಲರ ಭಾವಚಿತ್ರಕ್ಕೆ ಪುಷ್ಪಮಾಲೆ ಸಮರ್ಪಿಸಿದರು. ಪರೀಕ್ಷಾಂಗ ಕುಲಸಚಿವರಾದ ಪ್ರೊ.ಎಸ್.ಎಂ.ಗೋಪಿನಾಥ್ ಅವರು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪಮಾಲೆಯನ್ನು ಸಮರ್ಪಿಸಿ, ನಮ್ಮ ದೇಶ ಕಂಡ ಅಪರೂಪದ ದಕ್ಷ ಆಡಳಿತಗಾರರು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು. ಆದರ್ಶ ವ್ಯಕ್ತಿತ್ವದ ಶಕ್ತಿವಂತರಾಗಿದ್ದರು.
ದೇಶದ ಹಿತಕ್ಕಾಗಿ ಹಗಲಿರುಳು ದುಡಿದವರು. ಅವರಂತೆ ರಾಷ್ಟ್ರೀಯ ಐಕ್ಯತೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸೋಣ ವೆಂದರು. ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಡಾ.ಯಾದವ್ ಬೊಡ್ಕೆ, ಜಯಕುಮಾರ್, ವಿಜಯ್, ನಾಗೇಶ್, ರಮೇಶ್ ಮೊದಲಾದವರು ಭಾಗವಹಿಸಿದ್ದರು.