ಉಡುಪಿ ಜಿಲ್ಲೆಯಲ್ಲಿ ಬಿಚ್ಚಿ ಬೀಳಿಸಿದ್ದ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಮರಣೋತ್ತರ ಪರೀಕ್ಷೆ ವರದಿ ಕೈ ಸೇರಿದ್ದು ವರದಿಯಲ್ಲಿ ಉಸಿರುಗಟ್ಟಿ ಸಾವನಪ್ಪಿರುವ ಬಗ್ಗೆ ಉಲ್ಲೇಖಿಸಲಾಗಿದೆ.
ಉಸಿರುಗಟ್ಟಿ ಸಾವು ಸಂಭವಿಸಿರುವುದು, ಮುಖದಲ್ಲಿ ಗಾಯದ ಗುರುತು ಮೂಡಿರುವ ಬಗ್ಗೆ ವರದಿಯಲ್ಲಿ ಉಲ್ಲೇಖವಾಗಿದೆ. ಪೊಲೀಸ್ ತನಿಖೆ ಮತ್ತಷ್ಟು ತಿರುಗುಗೊಂಡಿದೆ ಮೊಬೈಲ್ ಸಂಭಾಷಣೆ, ಕರೆ ಮಾಡಿದ ವಿವರ, ನೆಟ್ವರ್ಕ್ ಮಾಹಿತಿ, ಸಿಸಿಟಿವಿ ಬಗ್ಗೆ ಪೊಲೀಸರಿಂದ ತನಿಖೆ ವೇಗ ಪಡೆದುಕೊಂಡಿದೆ. ಕೊಲೆ ಸಂಶಯದಿಂದ ಆರಂಭದಲ್ಲೇ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮಾಡಲಾಗಿತ್ತು. ಉಸಿರುಗಟ್ಟಿ ಸಾಯಿಸಿರುವುದು ಪೋಸ್ಟ್ಮಾರ್ಟಮ್ ರಿಪೋರ್ಟ್ ನಲ್ಲಿ ಸಾಬೀತಾಗಿದೆ. ಕೊಲೆಯಾಗಿ 6ನೇ ದಿನ ಮೂಳೆ ಸಂಗ್ರಹಿಸಿರುವ ಪೊಲೀಸರು ವಿಷ ಬಳಕೆಯ ರಾಸಾಯನಿಕ ಅಂಶಗಳ ಬಗ್ಗೆ ಕಾದು ನೋಡಬೇಕಾಗಿದೆ.
ಮೃತ ಬಾಲಕೃಷ್ಣ ಪೂಜಾರಿಯ ಸಹೋದರ ಪ್ರಕಾಶ್ “ಸ್ಲೋ ಪಾಯ್ಸನ್ ಕೊಟ್ಟರೂ ಆಸ್ಪತ್ರೆಗಳಿಗೆ ಯಾಕೆ ಗೊತ್ತಾಗಿಲ್ಲ?” ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಮಣಿಪಾಲ, ಕೆಎಂಸಿ ಸೇರಿದಂತೆ ಒಟ್ಟು ಆರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದ್ದರೂ, ಯಾವ ಆಸ್ಪತ್ರೆಯಲ್ಲೂ ಸ್ಲೋ ಪಾಯಿಸನ್ ಕೊಟ್ಟ ಬಗ್ಗೆ ಮಾಹಿತಿ ತಿಳಿದಿಲ್ಲ. ಹಾಗಾಗಿ ಆಸ್ಪತ್ರೆಗಳನ್ನು ಕೂಡ ಆರೋಪಿ ಸ್ಥಾನದಲ್ಲಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಮಾ ಸಹೋದರ ಸಂದೀಪ್ ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದು, ಪ್ರತಿಮಾಳ ಕೃತ್ಯ ಬಯಲಿಗೆ ತಂದವನೇ ಸಂದೀಪ್. ವಾಯ್ಸ್ ರೆಕಾರ್ಡ್ ಮಾಡುವ ಮೂಲಕ ಸಂಚು ಬಯಲು ಮಾಡಿದ್ದು, ಈಗ “ನನಗೂ ಸಹೋದರಿ ಸ್ಲೋ ಪಾಯಿಸನ್ ಹಾಕಿರಬಹುದು” ಎಂದು ಹೇಳಿಕೆ ನೀಡಿದ್ದಾನೆ.
“ನನಗೆ ನರಗಳ ನೋವು ಕಾಣಿಸುತ್ತಿದೆ. ಸಹೋದರಿಯ ಅಕ್ರಮ ಸಂಬಂಧಕ್ಕೆ ನಾನು ಅಡ್ಡಿಯಾಗಿದ್ದೆ. ನಾನು ಕೂಡ ಹೆಲ್ತ್ ಚೆಕ್ ಅಪ್ ಮಾಡಿಸಿಕೊಳ್ಳಬೇಕು. ಎರಡು ಬಾರಿ ಆಕೆಯ ಮನೆಯಲ್ಲಿ ಊಟ ಮಾಡಿದ್ದೆ. ಆಕೆ ನನಗೂ ವಿಷ ಹಾಕಿರಬಹುದು ಎಂಬ ಸಂಶಯವಿದೆ.ಪ್ರತಿಮಾಗೆ ಹಾಗು ದಿಲೀಪ್ ಇಬ್ಬರಿಗೂ ಕಠಿಣ ಶಿಕ್ಷೆ ಆಗಬೇಕು” ಎಂದು ಹೇಳಿದ್ದಾರೆ.
ದಿಲೀಪ್ ಹೆಗ್ಡೆ ಜೊತೆಗಿನ ಒಡನಾಟ ಬಯಲಾದ ಬಳಿಕ ಮಾತುಕತೆ ವೇಳೆ ದಿಲೀಪ್ ತಂದೆ ಕೂಡ ಬಂದಿದ್ದು, ‘ಇನ್ನು ಮುಂದೆ ನನ್ನ ಮಗ ಆಕೆಯ ಜೊತೆ ಕಾಣಿಸಿಕೊಳ್ಳಲ್ಲ’ ಎಂದಿದ್ದರು. ಆದರೂ ಇಬ್ಬರ ನಡುವೆ ಒಡನಾಟ ನಿಲ್ಲದೆ ಮಾತುಕತೆ ನಡೆದ ಸಿಸಿಟಿವಿ ಫುಟೇಜ್ ಅಜೆಕಾರ ಠಾಣೆಯಲ್ಲಿ ಭದ್ರವಾಗಿದೆ. ಎಲ್ಲಾ ಸಾಕ್ಷಿಗಳ ಪರಿಗಣಿಸಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು” ಎಂದು ಸಂದೀಪ್ ಹೇಳಿಕೆ ನೀಡಿದ್ದಾರೆ.