ಚಿಕ್ಕಮಗಳೂರು : ವಕ್ಫ್ ಬೋರ್ಡ್ ಅನ್ನೋದು ಆಧುನಿಕ ಭಸ್ಮಾಸುರ. ಆಧುನಿಕ ಭಸ್ಮಾಸುರನನ್ನ ನಾಶ ಮಾಡೋದಕ್ಕೆ ಒಬ್ಬ ಮೋಹಿನಿ ಸಾಲಲ್ಲ, ಇಡೀ ಹಿಂದೂ ಸಮಾಜವೇ ಒಂದಾಗಬೇಕು ಎಂದು ವಕ್ಫ್ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ವೋಟಿನ ಆಸೆಗೆ ಅವರಿಗೆ ನಮ್ಮವರೇ ವರ ಕೊಟ್ಟರು. ಹಿಂದಿನ ಭಸ್ಮಾಸುರನಂತೆ ಇಂದಿನ ಭಸ್ಮಾಸುರ ಎಲ್ಲರ ತಲೆ ಮೇಲೆ ಕೈ ಇಡಲು ಬಂದಿದ್ದಾನೆ. ಭಗವಂತ ಮತ್ತೊಮ್ಮೆ ಮೋಹಿನಿ ರೂಪದಲ್ಲಿ ಭಸ್ಮಾಸುರನನ್ನ ನಾಶ ಮಾಡಬೇಕಾದ ಅವಶ್ಯಕತೆ ಇದೆ. ಆ ಭಸ್ಮಾಸುರ ವರ ಕೊಟ್ಟ ಶಿವನನ್ನೇ ಅಟ್ಟಿಸಿಕೊಂಡು ಹೋದನಂತೆ. ಆಗ ವಿಷ್ಣು ಮೋಹಿನಿ ರೂಪ ತಾಳಿ ಭಸ್ಮಾಸುರನನ್ನ ನಾಶ ಮಾಡಿದ ಕಥೆ ಕೇಳಿದ್ದೇವೆ. ಆಧುನಿಕ ಭಸ್ಮಾಸುರನನ್ನ ನಾಶ ಮಾಡೋದಕ್ಕೆ ಇಡೀ ಹಿಂದೂ ಸಮಾಜವೇ ಒಂದಾಗಬೇಕು ಎಂದಿದ್ದಾರೆ.
ವಕ್ಫ್ ಬೋರ್ಡಿಗೆ ಪರಮಾಧಿಕಾರವಿದೆ, ದೇಶ-ಜಗತ್ತಿನ ಯಾವ ಆಸ್ತಿಯನ್ನಾದರೂ ನಮ್ಮದು ಅನ್ನಬಹುದು. ಒಮ್ಮೆ ಘೋಷಣೆ ಮಾಡಿಕೊಂಡರೆ ಅಲ್ಲಾಗೆ ಸೇರಿದ್ದು ಅಂತಾರೆ. ಬಲಿ ಚಕ್ರವರ್ತಿ ವಿಷ್ಣುವಿನ ಅವತಾರದ ವಾಮನನಿಗೆ ಆ ಕಾಲದಲ್ಲೇ ದಾನ ಕೊಟ್ಟಿದ್ದಾನೆ. ಮತ್ತೆ ದಾನ ಕೊಡಬೇಕು ಅಂದರೆ ವಿಷ್ಣುವಿನ ಅವತಾರದ ವಾಮನನೇ ಬಂದು ಕೊಡಬೇಕು. ಇಡೀ ಭೂಮಂಡಲವೇ ಮಹಾ ವಿಷ್ಣುಗೆ ಸೇರಿದ್ದು. ಮಹಾವಿಷ್ಣು ಎಲ್ಲಿವರೆಗೆ ಇನ್ನೊಬ್ಬರಿಗೆ ಭೂಮಿ ಕೊಡಲ್ವೋ ಅಲ್ಲಿವರೆಗೂ ಅದು ಸನಾತನ ಧರ್ಮೀಯರದ್ದು. ಸನಾತನ ಧರ್ಮದಿಂದ ದೂರ ಹೋದವರಿಗೆ ಭೂಮಿ ಮೇಲೆ ಬದುಕುವ ಹಕ್ಕಿದೆ ಅಷ್ಟೆ. ದಶಾವತಾರ, ದೇವನೊಬ್ಬ ನಾಮ ಹಲವು, ಬಹುದೇವತಾರಾಧನೆ ಬಗ್ಗೆ ನಂಬಿಕೆ ಇಟ್ಟಿದ್ದಾರೋ ಅವರಿಗೆ ಮಾತ್ರ ವಾರಸುದಾರಿಕೆ ಇದೆ ಎಂದು ಕಿಡಿಕಾರಿದ್ದಾರೆ.

































