ಕಾಸರಗೋಡು: ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ಕಾಸರಗೋಡಿನಿಂದ ಆಲುವಾ ನ್ಯಾಯಾಲಯಕ್ಕೆ ಸಾಗಿಸುತ್ತಿದ್ದಾಗ ಆರೋಪಿ ದಾರಿ ಮಧ್ಯೆ ರೈಲಿನಿಂದ ಹೊಳೆಗೆ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ, ಈ ವೇಳೆ ಪೊಲೀಸರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೊಳೆಗೆ ಹಾರಿ ಆತನನ್ನು ಬಂಧಿಸಿದ ಘಟನೆ ನಡೆದಿದೆ.
ಇಡುಕ್ಕಿ ನಿವಾಸಿ ಸನೀಶ್ (40) ಹೊಳೆಗೆ ಹಾರಿದ ಆರೋಪಿ. ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿ ಈತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದರು.
ಈತನನ್ನು ಇಬ್ಬರು ಪೊಲೀಸರ ಭದ್ರತೆಯೊಂದಿಗೆ ಮಂಗಳೂರು-ತಿರುವನಂತಪುರ ಏರನಾಡು ಎಕ್ಸ್ಪ್ರೆಸ್ ರೈಲಿನಲ್ಲಿ ಆಲುವಾಕ್ಕೆ ಸಾಗಿಸಲಾಗುತ್ತಿತ್ತು. ರೈಲು ಶೋರ್ನೂರು ಭಾರತಪುಳದ ಸೇತುವೆ ಬಳಿ ತಲುಪಿದಾಗ ಆರೋಪಿ ತನಗೆ ಶೌಚಾಲಯಕ್ಕೆ ಹೋಗಬೇಕೆಂದು ಪೊಲೀಸರಲ್ಲಿ ತಿಳಿಸಿದ್ದಾನೆ. ಆಗ ಪೊಲೀಸರು ಆತನ ಕೈಕೋಳ ಕಳಚಿ ಶೌಚಾಲಯ ಬಳಿ ಸಾಗಿಸಲೆತ್ನಿಸಿದಾಗ ಪೊಲೀಸರ ಕೈಯಿಂದ ತಪ್ಪಿಸಿ ಸೇತುವೆಯಿಂದ ನದಿಗೆ ಹಾರಿದ್ದ. ಕೂಡಲೇ ಪೊಲೀಸರೂ ಹೊಳೆಗೆ ಹಾರಿ ಆತನನ್ನು ಬಂಧಿಸಿದರು. ರೈಲು ಸೇತುವೆಯಲ್ಲಿ ಸಾಗುವಾಗ ವೇಗವನ್ನು ಕಡಿಮೆಗೊಳಿಸಲಾಗಿತ್ತು.
ಹೊಳೆಗೆ ಹಾರಿದ ಸನೀಶ್ ಪ್ರಜ್ಞೆ ತಪ್ಪಿದ್ದು, ತೃಶ್ಶೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.