ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆ: ಮತದಾನ ಪ್ರಕ್ರಿಯೆ ಆರಂಭ

ಬೆಂಗಳೂರು: ಉಪಚುನಾವಣೆ ನಡೆಯುತ್ತಿರುವ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಜನ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸುತ್ತಿದ್ದಾರೆ. ಈ ಮೂರೂ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆಯಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಒಟ್ಟು 2,32,949 ಮತದಾರರಿದ್ದು, 1,12,324 ಪುರುಷ ಹಾಗೂ 1,20,617 ಮಹಿಳಾ ಮತದಾರರಿದ್ದಾರೆ. 8 ಜನ ತೃತೀಯ ಲಿಂಗಿಗಳಿದ್ದಾರೆ. 85 ವರ್ಷಕ್ಕೂ ಮೇಲ್ಪಟ್ಟ ಒಟ್ಟು 1,613 ಮತದಾರರಲ್ಲಿ 612 ಪುರುಷರು ಹಾಗೂ 1,001 ಮಹಿಳೆಯರಿದ್ದಾರೆ. 3,011 ಜನ ದಿವ್ಯಾಂಗರಲ್ಲಿ 1,669 ಪುರುಷ ಹಾಗೂ 1,342 ಮಹಿಳಾ ಮತದಾರರಿದ್ದಾರೆ. ಇನ್ನು 8,338 ಯುವ ಮತದಾರರಿದ್ದಾರೆ. ಜೊತೆಗೆ 47 ಸೇವಾ ಮತದಾರರು ಮತಹಕ್ಕು ಹೊಂದಿದ್ದಾರೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಎನ್​ಡಿಎ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಮತ್ತು ಕಾಂಗ್ರೆಸ್​ನಿಂದ ಯಾಸೀರ್ ಖಾನ್ ಪಠಾಣ್ ನಡುವೆ ನೇರ ಹಣಾಹಣಿ ಇದೆ. ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ- 2,37,525. ಈ ಪೈಕಿ 1,21,443 ಪುರುಷರು ಮತ್ತು 1,16,076 ಮಹಿಳೆಯರು ಹಾಗೂ ಇತರ 6 ಮತದಾರರಿದ್ದಾರೆ. ಒಟ್ಟು 241 ಮತಗಟ್ಟೆಗಳಿದ್ದು, 92 ಸೂಕ್ಷ್ಮ ಮತ್ತು 141 ಸಾಮಾನ್ಯ ಮತಟ್ಟೆಗಳಿವೆ. ಭದ್ರತೆಗಾಗಿ ಎಸ್​​ಪಿ, ಎಎಸ್​​ಪಿ, 4 ಡಿವೈಎಸ್​​ಪಿ, 12 ಸಿ‌ಪಿಐ, 24 ಪಿಎಸ್​​ಐ, 68 ಎ‌ಎಸ್​​ಐ, ಸೇರಿ 716 ಪೊಲೀಸ್ ಸಿಬ್ಬಂದಿ ಜೊತೆಗೆ 4 ಕೆಎಸ್​ಆರ್​ಪಿ ಮತ್ತು ಡಿಆರ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇನ್ನು ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಅನ್ನಪೂರ್ಣ ತುಕಾರಾಂ ಮತ್ತು ಎನ್​ಡಿಎ ಅಭ್ಯರ್ಥಿಯಾಗಿ ಬಂಗಾರು ಹನುಮಂತು ಕಣದಲ್ಲಿದ್ದಾರೆ. ಇಲ್ಲಿ ಒಟ್ಟು 253 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 1,215 ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 2,36,100 ಮತದಾರರಿದ್ದಾರೆ. ಈ ಪೈಕಿ 1,17,789 ಪುರುಷ ಮತ್ತು 1,18,282 ಮಹಿಳೆ ಹಾಗೂ 29 ತೃತೀಯ ಲಿಂಗಿ ಮತದಾರರು ಇದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement