ತುಳಸಿ ಪೂಜೆಯ ಶುಭ ಮುಹೂರ್ತ ಮತ್ತು ಪೂಜೆ ವಿಧಾನದ ಬಗ್ಗೆ ತಿಳಿಯಿರಿ

ಹಿಂದೂ ಧರ್ಮದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ತುಳಸಿ ಪೂಜೆ ಕೂಡಾ ಒಂದು. ಪ್ರತಿವರ್ಷ ಕಾರ್ತಿಕ ಮಾಸದ ದ್ವಾದಶಿ ತಿಥಿಯಂದು ತುಳಸಿ ಪೂಜೆ ಅಥವಾ ತುಳಸಿ ವಿವಾಹವನ್ನು ಮಾಡಲಾಗುತ್ತದೆ. ಈ ಬಾರಿ ತುಳಸಿ ಪೂಜೆ ಯಾವಾಗ? ಈ ಪೂಜೆಯ ಶುಭ ಮುಹೂರ್ತ ಮತ್ತು ಆಚರಣೆಗಳ ಬಗ್ಗೆ ತಿಳಿಯೋಣ.

ಹಿಂದೂ ಧರ್ಮದಲ್ಲಿ ತುಳಸಿ ವಿವಾಹಕ್ಕೆ ವಿಶೇಷ ಮಹತ್ವವಿದೆ. ಕಾರ್ತಿಕ ಮಾಸದಲ್ಲಿ ಬರುವ ಶುಕ್ಲ ಪಕ್ಷದ ಏಕಾದಶಿಯ ಮಾರನೇ ದಿನವಾದ ದ್ವಾದಶಿಯಂದು ಈ ತುಳಸಿ ವಿವಾಹ ಅಥವಾ ತುಳಸಿ ಪೂಜೆಯನ್ನು ಮಾಡುವ ಸಂಪ್ರದಾಯವಿದೆ. ಈ ಬಾರಿ ನವೆಂಬರ್‌ 13 ರಂದು ತುಳಸಿ ಪೂಜೆಯನ್ನು ಆಚರಿಸಲಾಗುತ್ತದೆ. ಹಾಗಾದರೆ ಹಿಂದೂ ಧರ್ಮದಲ್ಲಿ ತುಳಸಿ ಪೂಜೆಯ ಮಹತ್ವವೇನು? ಈ ಪೂಜೆಯ ಶುಭ ಮುಹೂರ್ತ ಮತ್ತು ಪೂಜೆ ವಿಧಿವಿಧಾನಗಳ ಬಗ್ಗೆ ತಿಳಿಯಿರಿ.

 

Advertisement

ತುಳಸಿ ಪೂಜೆಯ ಶುಭ ಮುಹೂರ್ತ:
ದೃಕ್‌ ಪಂಚಾಂಗದ ಪ್ರಕಾರ ಈ ಬಾರಿ ತುಳಸಿ ಪೂಜೆ ಅಥವಾ ತುಳಸಿ ವಿವಾಹವನ್ನು ನವೆಂಬರ್‌ 13, ಬುಧವಾರದಂದು ಆಚರಿಸಲಾಗುತ್ತದೆ. ನವೆಂಬರ್‌ 12 ಸಂಜೆ 04:04 ಕ್ಕೆ ದ್ವಾದಶಿ ತಿಥಿ ಆರಂಭವಾಗಿ ನವೆಂಬರ್‌ 13 ರ ಮಧ್ಯಾಹ್ನ 1:01 ಕ್ಕೆ ದ್ವಾದಶಿ ತಿಥಿ ಕೊನೆಗೊಳ್ಳುತ್ತದೆ.

 

ತುಳಸಿ ಪೂಜೆಯ ವಿಧಾನ:
ಏಕಾದಶಿ ಅಥವಾ ದೇವುತಾನಿ ಏಕಾದಶಿಯ ದಿನದಂದು ಮುಂಜಾನೇ ಬೇಗ ಎದ್ದು ಪುಣ್ಯ ಸ್ನಾನ ಮಾಡಿ, ಶುಭ್ರ ಬಟ್ಟೆ ತೊಟ್ಟು ಬಳಿಕ ತುಳಸಿ ಕಟ್ಟೆಯನ್ನು ಮದುವಣಗಿತ್ತಿಯಂತೆ ಅಲಂಕರಿಸಬೇಕು. ತುಳಸಿ ಕಟ್ಟೆಗೆ ಚಪ್ಪರ ನಿರ್ಮಾಣ ಮಾಡಿ ಅರಶಿನ ಕುಂಕುಮಗಳಿಂದ ಹಾಗೂ ಹೂವುಗಳಿಂದ ಕಟ್ಟೆಯನ್ನು ಸಿಂಗರಿಸಿ ಮಂಗಳ ದ್ರವ್ಯಗಳಿಂದ ಪೂಜಿಸಬೇಕು. ಮತ್ತು ತುಳಸಿ ಕಟ್ಟೆ ಮುಂದೆ ರಂಗೋಲಿ ಬಿಡಿಸಬೇಕು. ನಂತರ ವಿಷ್ಣುವಿನ ಸ್ವರೂಪವಾಗಿ ಬೆಟ್ಟದ ನೆಲ್ಲಿಕಾಯಿ ಗಿಡ ಅಥವಾ ಕೃಷ್ಣ, ರಾಮನ ಫೋಟೋ ಇಲ್ಲವೇ ಸಾಲಿಗ್ರಾಮದ ಕಲ್ಲನ್ನು ತುಳಸಿ ಗಿಡದ ಪಕ್ಕ ಇಟ್ಟು ಹೂವು ಹಣ್ಣುಗಳಿಂದ ಅಲಂಕರಿಸಬೇಕು. ನಂತರ ದೇವರ ಭಾವಚಿತ್ರ ಅಥವಾ ನೆಲ್ಲಿ ಗಿಡ ಹಾಗೂ ತುಳಸಿ ಗಿಡಕ್ಕೆ ಹತ್ತಿಯಿಂದ ತಯಾರಿಸಿದ ಮಾಲೆಯನ್ನು ತೊಡಿಸಿ ಮದುವೆಯ ಶಾಸ್ತ್ರ ಮಾಡಬೇಡು. ಹೀಗೆ ವಿಷ್ಣು ಮತ್ತು ತುಳಸಿ ವಿವಾಹವನ್ನು ಭಕ್ತರು ಶ್ರದ್ಧಾಪೂರ್ವಕವಾಗಿ ಆಚರಿಸುತ್ತಾರೆ. ಮತ್ತು ಊರಿನಿಂದ ಊರಿಗೆ ತುಳಸಿ ವಿವಾಹದ ಆಚರಣೆಯ ವಿಧಾನ ಭಿನ್ನವಾಗಿರುತ್ತದೆ.

 

ತುಳಸಿ ಪೂಜೆಯ ಮಹತ್ವ:
ಹಿಂದೂ ಧರ್ಮದಲ್ಲಿ ತುಳಸಿ ಪೂಜೆಗೆ ಅಥವಾ ತುಳಸಿ ವಿವಾಹಕ್ಕೆ ಅದರದ್ದೇ ಆದ ಮಹತ್ವವಿದೆ. ಕಾರ್ತಿಕ ಮಾಸದಲ್ಲಿ ತುಳಸಿ ಮತ್ತು ವಿಷ್ಣುವಿನ ರೂಪವಾದ ಸಾಲಿಗ್ರಾಮಕ್ಕೆ ಮದುವೆ ಮಾಡಿದರೆ ಭಕ್ತರ ಹಿಂದಿನ ಜನ್ಮದ ಎಲ್ಲಾ ಪಾಪಗಳು ನಾಶವಾಗುತ್ತದೆ ಎಂಬ ನಂಬಿಕೆಯಿದೆ. ಅಲ್ಲದೆ ತುಳಸಿ ಪೂಜೆಯನ್ನು ಮಾಡುವುದರಿಂದ ವೈವಾಹಿಕ ಜೀವನದಲ್ಲಿ ಉಂಟಾಗುವ ಕಲಹಗಳು ದೂರವಾಗುತ್ತದೆ. ದಾಂಪತ್ಯ ಜೀವನದಲ್ಲಿ ಪ್ರೀತಿ, ಸಂತೋಷ ಹೆಚ್ಚಾಗುತ್ತದೆ ಮತ್ತು ಮದುವೆಯಾಗದವರಿಗೆ ಶೀಘ್ರವೇ ಕಂಕಣಭಾಗ್ಯ ಕೂಡಿ ಬರುತ್ತದೆ ಎಂದು ನಂಬಿಕೆಯೂ ಇದೆ.

 

ತುಳಸಿ ವಿವಾಹದ ಕುರಿತ ಕಥೆ:
ದಂತಕಥೆಯ ಪ್ರಕಾರ ವೃಂದಾ ಎಂಬ ಹೆಸರಿನ ಯುವತಿಯೇ ತುಳಸಿ ಗಿಡದ ರೂಪ ಪಡೆದಿರುವುದು. ವೃಂದಾ ಜಲಂಧರನೆಂಬ ದುಷ್ಟ ರಾಜನನ್ನು ಮದುವೆಯಾಗಿದ್ದಳು. ಈಕೆ ವಿಷ್ಣುವಿನ ಮಹಾನ್‌ ಭಕ್ತೆ ಮಾತ್ರವಲ್ಲದೆ ಮಹಾನ್‌ ಪತಿವ್ರತೆಯಾಗಿದ್ದಳು. ಇದೇ ಕಾರಣಕ್ಕೆ ಮೂರು ಲೋಕಕ್ಕೂ ಉಪಟಳ ನೀಡುತ್ತಿದ್ದ ಜಲಂಧರನನ್ನು ಸೋಲಿಸುವುದು ದೇವಾನುದೇವತೆಗಳಿಗೆ ಅಸಾಧ್ಯವಾಗಿತ್ತು. ಈ ಸಂದರ್ಭದಲ್ಲಿ ಶಿವನು ಏನು ಮಾಡುವುದೆಂದು ವಿಷ್ಣುವಿನ ಮೊರೆ ಹೋಗುತ್ತಾನೆ. ಆಗ ವಿಷ್ಣುವು ಜಲಂಧರ ರೂಪ ತಾಳಿ ವೃಂದಾಳ ಬಳಿಗೆ ಬಂದು ಮೋಹಿಸಿ ಆಕೆಯ ಪಾವಿತ್ರ್ಯಕ್ಕೆ ಧಕ್ಕೆ ತರುತ್ತಾನೆ. ಈ ಸಂಧರ್ಭದಲ್ಲಿ ಶಿವನು ಜಲಂಧರ ರಾಜನನ್ನು ಸಂಹರಿಸುತ್ತಾನೆ. ಇತ್ತ ತನ್ನ ಚಾರಿತ್ರ್ಯಕ್ಕೆ ಧಕ್ಕೆ ತರುವ ವಿಷ್ಣುವಿಗೆ ವೃಂದಾ ಕಪ್ಪು ಕಲ್ಲಾಗಿ ಹೋಗು ಎಂದು ಶಾಪ ನೀಡುವುದಲ್ಲದೆ ತನ್ನ ಚಾರಿತ್ರ್ಯಕ್ಕೆ ಧಕ್ಕೆಯುಂಟಾದ್ದರಿಂದ ಪಾಪಕ್ಕೆ ಪ್ರಾಯಶ್ಚಿತವಾಗಿ ಸತಿ ಸಹಗಮನವಾದಳು. ಅದೇ ಬೂದಿಯಿಂದ ತುಳಸಿ ಗಿಡ ಹುಟ್ಟಿತು. ವೃಂದಾಳ ಪಾತಿವ್ರತ್ಯಕ್ಕೆ ಹಾನಿ ತಂದಿದ್ದನ್ನು ಸರಿಪಡಿಸಲು ವಿಷ್ಣುವು ತುಳಸಿಯನ್ನು ವಿವಾಹವಾದನು. ಅಂದಿನಿಂದ ಪ್ರತಿವರ್ಷ ಕಾರ್ತಿಕ ಮಾಸದ ಏಕಾದಶಿಯ ದಿನ ಸಾಲಿಗ್ರಾಮ ಹಾಗೂ ತುಳಸಿ ಗಿಡಕ್ಕೆ ವಿವಾಹ ನೆರವೇರಿಸುವ ಸಂಪ್ರದಾಯವನ್ನು ಪಾಲಿಸುತ್ತಾ ಬರಲಾಗುತ್ತಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement