ನವದೆಹಲಿ : ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಆರೋಪಿಗಳ ಮನೆ ಸೇರಿದಂತೆ ಇತರೆ ಆಸ್ತಿ ಪಾಸ್ತಿಗಳನ್ನು ನಾಶ ಮಾಡುವ ಬುಲ್ಡೋಜರ್ ನ್ಯಾಯದ ಹೆಸರಿನಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆಗೆ ಸದ್ಯ ಬ್ರೇಕ್ ಬಿದ್ದಿದೆ. ಅಧಿಕಾರಿಗಳು ನ್ಯಾಯಾಧೀಶರಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿ ಎಚ್ಚರಿಕೆ ನೀಡಿದೆ.
ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಕೆಲವು ಬಿಜೆಪಿ ಆಡಳಿತ ರಾಜ್ಯಗಳಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂದು ಕಟ್ಟಡಗಳ ತೆರವಿಗೆ ಮಾರ್ಗಸೂಚಿ ಪ್ರಕಟಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ.ಬಿ.ಆರ್ ಗವಾಯಿ ನೇತೃತ್ವದ ದ್ವಿ ಸದಸ್ಯ ಪೀಠ, ಬುಲ್ಡೋಜರ್ ಕಾರ್ಯಚರಣೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿತು. ಕಾರ್ಯಾಂಗವು ನ್ಯಾಯಾಂಗವನ್ನು ಅತಿಕ್ರಮಿಸಲು ಸಾಧ್ಯವಿಲ್ಲ, ಆರೋಪಿಯನ್ನು ಅಪರಾಧಿ ಎಂದು ನಿರ್ಧರಿಸಲು ಅಧಿಕಾರಿಗಳು ನ್ಯಾಯಾಧೀಶರಲ್ಲ. ಆರೋಪಿಯ ತಪ್ಪನ್ನು ಪೂರ್ವಾಗ್ರಹಕ್ಕೆ ಒಳಪಡಿಸಬಾರದು. ಕೇವಲ ಆರೋಪದ ಮೇಲೆ ನಾಗರಿಕರ ಮನೆಯನ್ನು ಅನಿಯಂತ್ರಿತವಾಗಿ ಕೆಡವುವುದು ಅಸಾಂವಿಧಾನಿಕ ಎಂದು ನ್ಯಾ. ಬಿ.ಆರ್ ಗವಾಯಿ ತಮ್ಮ ಆದೇಶದಲ್ಲಿ ಉಲ್ಲೇಖಿಸಿ ಹಲವು ಮಾರ್ಗಸೂಚಿ ಪ್ರಕಟಿಸಿದರು.