ಮಂಗಳೂರು: ಹಿಂಗಾರು ಚುರುಕುಗೊಂಡಿದ್ದು, ಕರಾವಳಿಯಲ್ಲಿ ಗುರುವಾರ ಸಂಜೆ ಬಳಿಕ ಗುಡುಗು ಸಹಿತ ಉತ್ತಮ ಮಳೆ ಸುರಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಧರ್ಮಸ್ಥಳ, ಕಡಬ, ಸವಣಾಲು, ಕಡಿರುದ್ಯಾವರ, ರಾಮಕುಂಜ, ತಣ್ಣೀರುಪಂತ, ಬಳ್ಪ, ಬಂದಾರು, ಮೈರೋಲ್ತಡ್ಕ, ಬಾಯಾರು, ಕರೋಪಾಡಿ, ಪುತ್ತೂರು, ಸುಳ್ಯ, ಪುತ್ತೂರು, ಮಂಗಳೂರು ಸಹಿತ ಜಿಲ್ಲೆಯ ಹಲವೆಡೆ ಮಳೆಯಾಗಿದೆ.
ಬೆಳಗ್ಗಿನಿಂದ ಸಂಜೆಯವರೆಗೆ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ ಏರಿಕೆಯಾಗಿ ಸೆಕೆಯ ಬೇಗೆ ಹೆಚ್ಚು ಇತ್ತು. ಮಂಗಳೂರಿನಲ್ಲಿ 34.9 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 2.1 ಡಿ.ಸೆ. ಏರಿಕೆ ಮತ್ತು 25.4 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 2.8 ಡಿ.ಸೆ. ಏರಿಕೆ ಕಂಡಿತ್ತು. ಮುಂದಿನ ಎರಡು ದಿನ ಜಿಲ್ಲೆಯಲ್ಲಿ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ.
ಉಡುಪಿಯಲ್ಲಿ ನಗರದ ವಿವಿಧೆಡೆ ಗುರುವಾರ ಸಂಜೆ ವೇಳೆಗೆ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದೆ. ಮಧ್ಯಾಹ್ನ ಬಿಸಿಲಿನ ವಾತಾವರಣವಿತ್ತು. ಸಂಜೆ ವೇಳೆಗೆ ದಿಢೀರ್ ಗುಡುಗು, ಮಿಂಚು ಸಹಿತ ಮಳೆ ಸುರಿದಿದೆ. ಮಣಿಪಾಲ, ಉಡುಪಿ ನಗರ, ಕರಾವಳಿ ಬೈಪಾಸ್, ಕಲ್ಯಾಣಪುರ, ಕಿನ್ನಿಮೂಲ್ಕಿ ಸಹಿತ ವಿವಿಧ ಕಡೆಗಳಲ್ಲಿ ಸ್ವಲ್ಪ ಹೊತ್ತು ಮಳೆ ಸುರಿದಿದೆ.
ಅಜೆಕಾರು ಪರಿಸರದಲ್ಲಿ ನ. 14ರ ಸಂಜೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಅಂಡಾರು, ಶಿರ್ಲಾಲು, ಅಜೆಕಾರು, ಕಡ್ತಲ ಭಾಗಗಳಲ್ಲೂ ಮಳೆ ಸುರಿದಿದೆ. ಹೆಬ್ರಿ ಪರಿಸರದಲ್ಲೂ ಗುಡುಗು ಸಹಿತ ಭಾರೀ ಮಳೆಯಾಗಿದೆ. ಈ ಮಳೆಯು ಭತ್ತ ಕಟಾವು ಮಾಡಿದವರಿಗೆ ಸಮಸ್ಯೆ ಆದರೆ, ಸುಗ್ಗಿ ಮಾಡುವವರಿಗೆ ಅನುಕೂಲಕರವಾಗಿದೆ.
ಗುರುವಾರ ಸಂಜೆ ಸುರಿದ ಗುಡುಗು ಮಿಂಚು ಸಹಿತ ಮಳೆಗೆ ನಗರ ಹಾಗೂ ಹೊರ ಭಾಗದ ಕೆಲವೆಡೆ ವಿದ್ಯುತ್ ವ್ಯತ್ಯಯಗೊಂಡಿದೆ. ಗ್ರಾಮೀಣ ಭಾಗದ ಕೆಲವು ಫೀಡರ್‌ಗಳಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಕಂಡುಬಂದಿದೆ. ನಗರದೊಳಗೆ ಸಮಸ್ಯೆ ಕಂಡುಬಂದಿಲ್ಲ. ಗ್ರಾಮೀಣ ಭಾಗದಲ್ಲಿ ಕೊಂಚ ವ್ಯತ್ಯಯಗಳಾಗಿವೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದು. ಫೀಡರ್‌ಗಳಲ್ಲಿ ಕಂಡು ಬಂದ ಸಣ್ಣಪುಟ್ಟ ದೋಷವನ್ನು ಮೆಸ್ಕಾಂ ಸಿಬ್ಬಂದಿ ಸರಿಪಡಿಸಿದ್ದಾರೆ.