ನವದೆಹಲಿ: ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರದಲ್ಲಿ ತಮ್ಮ ನಿಗದಿತ ಚುನಾವಣಾ ರ್ಯಾಲಿಗಳನ್ನು ರದ್ದುಗೊಳಿಸಿದ್ದಾರೆ ಮತ್ತು ದೆಹಲಿಗೆ ಮರಳಿದ್ದಾರೆ.
ಮಣಿಪುರದಲ್ಲಿ ಉಂಟಾಗಿರುವ ಹೊಸ ಹಿಂಸಾಚಾರದಲ್ಲಿ ಆರು ಜನರು ಸಾವನ್ನಪ್ಪಿದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಅಮಿತ್ ಶಾ ಅವರು ದೆಹಲಿಗೆ ಮರಳಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ನಾಪತ್ತೆಯಾಗಿದ್ದ ಆರು ಮಂದಿಯಲ್ಲಿ ಮೂವರು ಶವವಾದ ಬಳಿಕ ಜನರ ಆಕ್ರೋಶ ಮಿತಿಮೀರಿದೆ. ಆಕ್ರೋಶಿತರ ಗುಂಪು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಖಾಸಗಿ ನಿವಾಸದ ಮೇಲೂ ದಾಳಿ ನಡೆಸಿದೆ.
ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ಗಳನ್ನು ಸಹ ಸಿಡಿಸಿದ್ದು, ಜನರು ಮಣಿಪುರ ಸಿಎಂ ಎನ್. ಬಿರೇನ್ ಸಿಂಗ್ ಅವರ ನಿವಾಸದ ಮೇಲೆ ದಾಳಿ ನಡೆಸುವಾಗ ಅವರು ಮನೆಯಲ್ಲಿ ಇರಲಿಲ್ಲ. ಅವರು ತಮ್ಮ ಕಚೇರಿಯಲ್ಲಿದ್ದರು. ಹೀಗಾಗಿ ಯಾವುದೇ ಅನಾಹುತ ಆಗಿಲ್ಲ. ಸಿಎಂ ಬಿರೇನ್ ಸಿಂಗ್ ಸಂಪೂರ್ಣವಾಗಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.