ಚಿತ್ರದುರ್ಗ: ನಮ್ಮ ವ್ಯಕ್ತಿತ್ವ ಮತ್ತು ಜೀವನ ವಿಕಸನಗೊಳ್ಳಬೇಕಾದರೆ ಪಠ್ಯೇತರ ಚಟುವಟಿಕೆ ಅವಶ್ಯಕ ಎಂದು ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜು ಕನ್ನಡ ಉಪನ್ಯಾಸಕಿ ಡಾ.ಜಿ.ಕೆ.ಪ್ರೇಮ ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ ಶುಕ್ರವಾರ ನಗರದ ತ.ರಾ.ಸು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಪಠ್ಯೇತರ ಕಾರ್ಯ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಚಟುವಟಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಸಾಂಸ್ಕøತಿಕ, ಕ್ರೀಡೆ, ಎನ್.ಎಸ್.ಎಸ್, ಎನ್.ಸಿ.ಸಿ ಹಾಗೂ ರೆಡ್‍ಕ್ರಾಸ್ ಸೇರಿದಂತೆ ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಆತ್ಮ ವಿಶ್ವಾಸ, ಸಮಯದ ಮೌಲ್ಯ, ನೈತಿಕ ಜೀವನವನ್ನು ಮೌಲ್ಯಯುತವಾಗಿ ಜೀವಿಸಲು ಅನುಕೂಲವಾಗುತ್ತದೆ. ಜೀವನ ಸರಳ ಹಾಗೂ ಸುಂದರವಾಗಿದೆ. ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಿಂದ ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ಹೆಚ್.ಗುಡ್ಡದೇಶ್ವರಪ್ಪ ಮಾತನಾಡಿ, ಶಾಲಾ, ಕಾಲೇಜು ಜ್ಞಾನದ ಕಣಜವಿದ್ದಂತೆ. ಯಾರು ಅದನ್ನು ಮನಸ್ಸಿನಿಂದ ಸ್ಪರ್ಶಿಸುವರು ಜ್ಞಾನಿಗಳಾಗುತ್ತಾರೆ. ಶೈಕ್ಷಣಿಕ ಚಟುವಟಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆ ಅತ್ಯಗತ್ಯ. ಪಠ್ಯೇತರ ಚಟುವಟಿಕೆಗಳಾದ ಸಾಂಸ್ಕøತಿಕ, ಕ್ರೀಡೆ, ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮೂಡಿಸುವುದು. ಆದ್ದರಿಂದ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸಹನೆ, ಸಹಕಾರ, ಸಹಿಷ್ಣುತಾ ಮನೋಭಾವ ಬೆಳೆಯುತ್ತದೆ ಎಂದರು.
ಸಾಂಸ್ಕøತಿ ಸಮಿತಿ ಸಂಚಾಲಕ ಶಿವಣ್ಣ ಪ್ರಾಸ್ತವಿಕವಾಗಿ ಮಾತನಾಡಿದರು. ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕ ಡಾ.ಸಿ.ಚನ್ನಕೇಶವ ಸ್ವಾಗತಿಸಿದರು. ಸಮಾಜ ಶಾಸ್ತ್ರ ಪ್ರಾಧ್ಯಾಪಕ ಡಾ.ಡಿ.ಓ.ಸಿದ್ದಪ್ಪ ವಂದಿಸಿದರು. ರಕ್ಷಿತಾ ವತ್ಸಲಾ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪತ್ರಾಂಕಿತ ವ್ಯವಸ್ಥಾಪಕ ಆರ್.ವೆಂಕಟೇಶ್ ಹಾಗೂ ಎಲ್ಲಾ ಸಮಿತಿ ಸಂಚಾಲಕರು, ಕಾಲೇಜಿನ ಭೋದಕ-ಭೋದಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.

































