ಇಂದು ಚೆನ್ನಪಟ್ಟಣ ಫಲಿತಾಂಶ ಪ್ರಕಟವಾಗಲಿದೆ. ಆದರೆ ಅದಕ್ಕೂ ಮೊದಲೇ ನಿಖಿಲ್ ಎಂಎಲ್ಎ ಎಂಬ ನಾಮಫಲಕವನ್ನು ಅಭಿಮಾನಿಗಳು ರೆಡಿ ಮಾಡಿದ್ದಾರೆ.
ಚನ್ನಪಟ್ಟಣದಲ್ಲಿ ಪ್ರತಿಸ್ಪರ್ಧಿಯಾಗಿರುವ ಕಾಂಗ್ರೆಸ್ನ ಸಿಪಿ ಯೋಗೇಶ್ವರ್ ಹಾಗೂ ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ಇಬ್ಬರೂ ತಲಾ ಎರಡು ಬಾರಿ ಸೋತಿದ್ದಾರೆ. ಇದೇ ಕ್ಷೇತ್ರದಲ್ಲಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ ಎರಡು ಬಾರಿ ಸೋತಿದ್ದರು. ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭೆ ಹಾಗೂ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. ಹಾಗಾಗಿ ಈ ಚುನಾವಣೆಯಲ್ಲಿ ಯಾರು ಸೋತರು ಹ್ಯಾಟ್ರಿಕ್ ಸಾಧನೆ ಆಗಲಿದೆ.
ಈ ಹಿಂದೆ ಮಂಡ್ಯ, ರಾಮನಗರದಲ್ಲಿ ಸೋತು ಕಾರ್ಯಕರ್ತರಿಗೆ ನೋವು ಉಂಟಾಗಿತ್ತು. ಆದ್ರೆ ಈ ಬಾರಿ ತಮ್ಮ ಯುವ ನಾಯಕ ಚನ್ನಪಟ್ಟಣದಲ್ಲಿ ಗೆದ್ದೇ ಗೆಲ್ತಾರೆ ಎಂಬ ವಿಶ್ವಾಸದಲ್ಲಿ ಅಭಿಮಾನಿಗಳು ಇದ್ದಾರೆ. ಅದೇ ವಿಶ್ವಾಸದಲ್ಲಿ ಕೆಲ ಅಭಿಮಾನಿಗಳು ಶ್ರೀಯುತ ನಿಖಿಲ್ ಕುಮಾರಸ್ವಾಮಿ, ಶಾಸಕರು, ಚನ್ನಪಟ್ಟಣ ಎಂದು ಕಚೇರಿಗೆ ನಾಮಫಲಕವನ್ನು ರೆಡಿ ಮಾಡಿದ್ದಾರೆ.
ಮಂಡ್ಯದಲ್ಲೂ ಅಭಿಮಾನಿಗಳು ನಿಖಿಲ್ ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ. ಶ್ರೀರಂಗಪಟ್ಟದಲ್ಲಿರುವ ಶಕ್ತಿ ದೇವತೆ ಆರತಿ ಉಕ್ಕಡದ ಅಹಲ್ಯದೇವಿಗೆ ಕಾರ್ಯಕರ್ತ ಪ್ರವೀಣ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ ಮೈತ್ರಿ ಅಭ್ಯರ್ಥಿ ನಿಖಿಲ್ ಗೆಲ್ಲಲಿ ಎಂದು ಮೇಕೆ ಬಲಿಕೊಟ್ಟು ಹರಕೆ ಹೊತ್ತಿದ್ದಾರೆ.ಇಂದು ಮತದಾರ ಬರೆದಿರುವ ನಿರ್ಧಾರ ಹೊರ ಬೀಳಲಿದ್ದು, ಚನ್ನಪಟ್ಟಣದ ಅಧಿಪತಿ ಯಾರಾಗ್ತಾರೆ ಅನ್ನೋ ಕುತೂಹಲ ಗರಿಗೆದರಿದೆ