ಮುಂಬೈ: ಮಿರಾಕಲ್ ಎನ್ನುವಂತೆ ಮಾಜಿ ಕ್ರಿಕೆಟಿಗ ಮತ್ತು ರಾಜಕೀಯ ನಾಯಕ ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಸಿಧು ಬ್ರೆಸ್ಟ್ ಕ್ಯಾನ್ಸರ್ನ ಸ್ಟೇಜ್ 4 ವಿರುದ್ಧ ಸೆಣಸಾಡಿ ಗೆದ್ದಿದ್ದಾರೆ.
ಹೌದು. ಒಂದು ಕಾಲದಲ್ಲಿ ಟೀಮ್ ಇಂಡಿಯಾದ ಓಪನಿಂಗ್ ಬ್ಯಾಟ್ಸ್ಮನ್ ಆಗಿ ಮೈದಾನದಲ್ಲಿ ಅಬ್ಬರಿಸುತ್ತಿದ್ದ ನವಜೋತ್ ಸಿಂಗ್ ಸಿಧು, ಪಸ್ತುತ ತಮ್ಮ ದಿನಗಳನ್ನು ಕುಟುಂಬದವರೊಂದಿಗೆ ಹಾಗೂ ಕೆಲವು ಕಾಮಿಡಿ ಶೋಗಳಲ್ಲಿ ಕಳೆಯುತ್ತಿದ್ದಾರೆ. ಆದರೆ, ತಮ್ಮ ಧರ್ಮಪತ್ನಿ ನವಜೋತ್ ಕೌರ್ ಸಿಧುಗೆ ಸ್ತನ ಕ್ಯಾನ್ಸರ್ ಪತ್ತೆಯಾಗಿ, ಅದು ನಾಲ್ಕನೇ ಹಂತದ ಕ್ಯಾನ್ಸರ್ಗೆ ತಿರುತ್ತಿತ್ತು. ವೈದ್ಯರ ಬಳಿ ಪರಿಶೀಲನೆ ಮಾಡಿಸಿದಾಗ, ಆಕೆ ಬದುಕುವುದು ಅನುಮಾನ. ಬದುಕುಳಿಯುವ ಸಾಧ್ಯತೆ ಶೇ.3ರಷ್ಟು ಮಾತ್ರ ಎಂದು ಹೇಳಿದ್ದರು.
ಆದರೆ, ಇಂದು ನನ್ನ ಪತ್ನಿ ಸಾವನ್ನು ಗೆದ್ದು ಬಂದಿರುವುದು ಆಕೆ ಸೇವಿಸಿದ ಕಟ್ಟುನಿಟ್ಟಿನ ಆಹಾರ ಕ್ರಮ ಎಂದು ಭಾವುಕರಾಗಿ ಕೆಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ನನ್ನ ಪತ್ನಿ ಸ್ಟೇಜ್ 4 ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಇದು ಬಹಳ ಪರೂಪದ ಮೆಟಾಸ್ಟಾಸಿಸ್ ಎನ್ನಲಾಗಿತ್ತು. ಇದರಿಂದ ಆಕೆಯನ್ನು ಗುಣಮುಖ ಮಾಡಲು ಸ್ತನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಪಟಿಯಾಲಾದ ರಾಜೀಂದ್ರ ಆಸ್ಪತ್ರೆ ಮತ್ತು ಯಮುನಾನಗರದ ಡಾ.ವರ್ಯಂ ಸಿಂಗ್ ಆಸ್ಪತ್ರೆಯಲ್ಲಿ ಸುದೀರ್ಘ ಚಿಕಿತ್ಸೆ ಪಡೆದಿದ್ದಾರೆ. ಈ ಸವಾಲಿನ ಹಾದಿ ಕೌರ್ಗೆ ಬಹಳ ಕಷ್ಟಕರವಾಗಿತ್ತು. ನೋವಿನ ನಡುವೆಯೇ ಕಿಮೊಥೆರಪಿ ಸೆಷನ್ಗಳಿಗೆ ಹೋಗಿದ್ದಾರೆ ಎಂದು ಹೇಳಿದರು.
ಕೌರ್ ಶಿಸ್ತು, ಕಟ್ಟುನಿಟ್ಟಿನ ದಿನಚರಿ ಮತ್ತು ಆಹಾರಕ್ರಮ ಕ್ಯಾನ್ಸರ್ ಅನ್ನೇ ಸೋಲಿಸಿತು. ನನ್ನ ಪತ್ನಿ ಈಗ ಕ್ಯಾನ್ಸರ್ ಗೆದ್ದಿದ್ದಾಳೆ. ನಿಂಬೆ ರಸ, ಅರಿಶಿಣ, ಆಪಲ್ ಸೈಡರ್ ವಿನೆಗರ್, ಬೇವಿನ ಎಲೆಗಳು ಮತ್ತು ತುಳಸಿ ಎಲೆಗಳು ಆಹಾರದ ಭಾಗವಾಗಿತ್ತು. ಕುಂಬಳಕಾಯಿ, ದಾಳಿಂಬೆ, ಆಮ್ಲಾ, ಬೀಟ್ರೂಟ್ ಹೆಚ್ಚಾಗಿ ಸೇವಿಸಿದರು. ಉರಿಯೂತ ನಿವಾರಕ ಮತ್ತು ಕ್ಯಾನ್ಸರ್ ವಿರೋಧಿ ಆಹಾರಗಳನ್ನೇ ಹೆಚ್ಚಾಗಿ ನೀಡಲಾಗಿತ್ತು. ತೆಂಗಿನೆಣ್ಣೆ, ಕೋಲ್ಡ್ ಪ್ರೆಸ್ಡ್ ಎಣ್ಣೆ ಅಥವಾ ಬಾದಾಮಿ ಎಣ್ಣೆಯಿಂದ ಮಾಡಿದ ಅಡುಗೆಯನ್ನು ಮಾತ್ರ ತೆಗೆದುಕೊಳ್ಳುತ್ತಿದ್ದರು. ಬೆಳಗಿನ ಚಹಾದಲ್ಲಿ ದಾಲ್ಚಿನ್ನಿ, ಲವಂಗ, ಬೆಲ್ಲ ಮತ್ತು ಏಲಕ್ಕಿಯನ್ನು ತೆಗೆದುಕೊಂಡಿದ್ದರು. ನೈಸರ್ಗಿಕ ಆಹಾರ ಪದಾರ್ಥಗಳಿಂದಲೇ ನನ್ನವಳು ಗೆದ್ದಿದ್ದಾಳೆ ಎಂದು ಸಿಧು ಹೇಳಿದ್ದಾರೆ.