ಎಸ್. ನಿಜಲಿಂಗಪ್ಪರ ಮನೆ ಕರ್ನಾಟಕ ರತ್ನ ಭವನ ಆಗಲಿ: ಎಚ್.ಟಿ.ಬಳೆಗಾರ್ ಆಗ್ರಹ

WhatsApp
Telegram
Facebook
Twitter
LinkedIn

 

ಚಿತ್ರದುರ್ಗ: ರಾಷ್ಟ್ರನಾಯಕ, ಕರ್ನಾಟಕ ಏಕೀಕರಣದ ನೇತಾರ ಎಸ್.ನಿಜಲಿಂಗಪ್ಪ ನಾಡು ಕಂಡ ಅಪರೂಪದ ರಾಜಕಾರಣಿ. ಅವರು ಜೀವಿಸಿದ ನಿವಾಸವನ್ನು ಸ್ಮಾರಕವಾಗುತ್ತಿರುವುದು ಸಜ್ಜನ ರಾಜಕಾರಣಿಗೆ ಸಲ್ಲುತ್ತಿರುವ ಗೌರವ ಎಂದು ರಾಜ್ಯ ಉಗ್ರಾಣ ನಿಗಮದ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಎಚ್.ಟಿ.ಬಳೆಗಾರ್ ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ಪತ್ರಿಕಾ ಹೇಳಿಕೆ ನೀಡಿರುವ ಬಳೇಗಾರ್ ಅವರು, ಸ್ಮಾರಕಕ್ಕೆ ಕರ್ನಾಟಕ ರತ್ನ ಎಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ರಾಷ್ಟ್ರನಾಯಕ ನಿಜಲಿಂಗಪ್ಪ ಸಮಗ್ರ ಕರ್ನಾಟಕದ ಅಭಿವೃದ್ಧಿ ಹರಿಕಾರರು. ಹರಿದು ಹಂಚಿಹೋಗಿದ್ದ ರಾಜ್ಯವನ್ನು ಒಗ್ಗೂಡಿಸಿದ ನೇತಾರ. ತಮ್ಮ ಜೀವಿತಾವಧಿ ಕೊನೆಯವರೆಗೂ ಸರಳತೆ, ಪ್ರಾಮಾಣಿಕತೆ, ನಿಷ್ಠೂರತೆ ಮೈಗೂಡಿಸಿಕೊಂಡಿದ್ದ ನಿಜಲಿಂಗಪ್ಪ, ನಾಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಮಹಾ ನಾಯಕ.

ಪ್ರಧಾನಿ, ರಾಷ್ಟ್ರಪತಿ ಹುದ್ದೆ ಅಲಂಕರಿಸುವ ಅವಕಾಶವನ್ನು ಸ್ವಾಭಿಮಾನದ ಕಾರಣಕ್ಕೆ ನಿರಾಕರಿಸಿದ ನಿಜಲಿಂಗಪ್ಪ, ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿ ಕೊನೆ ಉಸಿರು ಇರುವವರೆಗೆ ಜೀವಿಸಿದ ವಿರಳ ರಾಜಕಾರಣಿ ಎಂದು ಬಣ್ಣಿಸಿದ್ದಾರೆ.

ಪ್ರಸ್ತುತ ರಾಜಕಾರಣಿಗಳು ಬೆಂಗಳೂರು ಜೀವನ ಇಷ್ಟಪಡುವ ಕಾಲಘಟ್ಟದಲ್ಲಿ, ನಿಜಲಿಂಗಪ್ಪ ಅವರು ವಕೀಲ ವೃತ್ತಿಯಲ್ಲಿ ಗಳಿಸಿದ ಸಂಪಾದನೆಯಲ್ಲಿ ಚಿತ್ರದುರ್ಗದಲ್ಲಿ ಕಟ್ಟಿಸಿದ ಮನೆಯಲ್ಲಿಯೇ ತಮ್ಮ ಕೊನೇ ದಿನಗಳನ್ನು ಕಳೆದ ಅಪರೂಪದ ಮುತ್ಸದ್ಧಿ ವ್ಯಕ್ತಿ.

ತಮ್ಮ ಅಧಿಕಾರವಧಿಯಲ್ಲಿ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಗಮನಹರಿಸುವ ಬದ್ಧತೆಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿಸಲು ಆಗದ್ದನ್ನು ಸದಾ ನೆನಪಿಸಿಕೊಂಡು ನೊಂದುಕೊಳ್ಳುತ್ತಿದ್ದ ನಿಜಲಿಂಗಪ್ಪ, ಬಯಲುಸೀಮೆ ಪ್ರದೇಶಕ್ಕೆ ಭದ್ರೆ ನೀರು ಹರಿಸುವಂತೆ ಮನೆ ಬಾಗಿಲಿಗೆ ಬಂದ ಎಲ್ಲ ಮುಖ್ಯಮಂತ್ರಿಗಳ ಬಳಿ ಬೇಡಿಕೊಳ್ಳುತ್ತಿದ್ದ ರೀತಿ ಅವರು ಹಿಂದುಳಿದ ಜಿಲ್ಲೆಯ ಕುರಿತು ಹೊಂದಿದ್ದ ಅದಮ್ಯ ಪ್ರೀತಿಗೆ ಸಾಕ್ಷಿ ಅಗಿತ್ತು ಎಂದಿದ್ದಾರೆ.

ಅಂತಿಮವಾಗಿ 2000 ಇಸವಿಯಲ್ಲಿ ನಿಧನ ಹೊಂದಿದ ಸಂದರ್ಭ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಎಸ್.ಎಂ.ಕೃಷ್ಣ, ಬಿ.ಎಸ್.ಯಡಿಯೂರಪ್ಪ ಸೇರಿ ಅನೇಕ ಗಣ್ಯರು ಬಳಿಕ ತಮ್ಮ ಅಧಿಕಾರವಧಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಶ್ರಮಿಸಿದ್ದಾರೆ. ಈಗ ಚಿತ್ರದುರ್ಗ ಜಿಲ್ಲೆ ಹಸಿರುವಾಗುವ ಕಾಲ ಸನಿಹವಾಗಿದೆ.

ಜಿಲ್ಲೆಯನ್ನು ಹಸಿರನ್ನಾಗಿಸುವ ಕನಸು ಕಂಡ ನಿಜಲಿಂಗಪ್ಪ ಸ್ಮರಣೆಗಾಗಿ ಅವರ ನಿವಾಸವನ್ನು ಕರ್ನಾಟಕ ರತ್ನ ಭವನ ಎಂದು ನಾಮಕರಣ ಮಾಡುವ ಮೂಲಕ ಸ್ಮಾರಕಗೊಳಿಸುವುದು ಉತ್ತಮ. ಈ ಮೂಲಕ ಸ್ವಾತಂತ್ರ್ಯ ಹೋರಾಟಗಾರ ನಿಜಲಿಂಗಪ್ಪ ಅವರಿಗೆ ಗೌರವ ಸಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.

ನಿಜಲಿಂಗಪ್ಪ ನಿವಾಸವನ್ನು ಸ್ಮಾರಕವನ್ನಾಗಿಸುವ ಪ್ರಥಮ ಪ್ರಯತ್ನ ಮಾಡಿದ ಬಿ.ಎಸ್.ಯಡಿಯೂರಪ್ಪಸ ಅವರ ಮೂಲಕ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ನಡೆಸಲಾಗುವುದು ಎಂದು ಬಳೇಗಾರ್ ತಿಳಿಸಿದ್ದಾರೆ.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon