ಬೆಂಗಳೂರು : ಜಾತಿ ವ್ಯವಸ್ಥೆಯಿಂದಲೇ ಅಸಮಾನತೆ-ಮನುಷ್ಯ ತಾರತಮ್ಯ ಸೃಷ್ಟಿಯಾಗಿದೆ. ಸಂವಿಧಾನ ವಿರೋಧಿಗಳು ಮತ್ತು ಮನುಸ್ಮೃತಿ ಬಗ್ಗೆ ಎಚ್ಚರವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದ್ದು, ನಾನು ಮುಖ್ಯಮಂತ್ರಿ ಆಗಿದ್ದೇ ಈ ಸಂವಿಧಾನ ಬಲದಿಂದ ಎಂದರು.
ಸಮಾಜ ಕಲ್ಯಾಣ ಇಲಾಖೆ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ 75 ನೇ ವರ್ಷದ ಸಂವಿಧಾನ ಅಂಗೀಕರಣ ದಿನೋತ್ಸವವನ್ನು ಉದ್ಘಾಟಿಸಿ, ಪ್ರಜಾಪ್ರಭುತ್ವ ದಿನದ ಯಶಸ್ಸಿಗೆ ಶ್ರಮಿಸಿದ ಜಿಲ್ಲಾಧಿಕಾರಿಗಳು ಮತ್ತು ನಾಗರಿಕ ಸಂಘಟನೆಗಳ ಮುಖಂಡರಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿ ಮಾತನಾಡಿದ ಅವರು,ವಿಶ್ವದಲ್ಲಿ ಅತೀ ದೀರ್ಘಕಾಲ ಜಾರಿಯಲ್ಲಿರುವ ಸಂವಿಧಾನ ನಮ್ಮದಾಗಿದೆ. ಸಂವಿಧಾನ ಜಾರಿ ಸಭೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಎಚ್ಚರಿಕೆಯನ್ನು ನಾವ್ಯಾರೂ ಮರೆಯಬಾರದು.
ಎಷ್ಟೇ ಒಳ್ಳೆ ಸಂವಿಧಾನ ನಮ್ಮದಾಗಿದ್ದರೂ ಅದು ಕೆಟ್ಟವರ ಕೈಗೆ ಹೋದರೆ ಪರಿಣಾಮವೂ ಕೆಟ್ಟದಾಗಿರುತ್ತದೆ ಎನ್ನುವ ಎಚ್ಚರಿಕೆ ನೀಡಿದ್ದಾರೆ. ಸಂವಿಧಾನದ ಮೌಲ್ಯಗಳನ್ನು ಪಾಲಿಸುವವರ ಕೈಯಲ್ಲಿ ಈ ಸಂವಿಧಾನ ಇದ್ದಾಗ ಮಾತ್ರ ಸಾರ್ಥಕತೆ ಬರುತ್ತದೆ ಎಂದು ಬಾಬಾ ಸಾಹೇಬರು ಹೇಳಿದ್ದರು.ಆದ್ದರಿಂದ ಈ ಸಂವಿಧಾನದ ಮೌಲ್ಯಗಳನ್ನು ವಿರೋಧಿಸುವವರ ಕೈಗೆ ಅಧಿಕಾರ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು.
ಆರ್ಥಿಕ ಅಸಮಾನತೆ, ಸಾಮಾಜಿಕ ಅಸಮಾನತೆ ಇರುವ ಸಮಾಜಕ್ಕೆ ನಾವು ಕಾಲಿಡುತ್ತಿದ್ದೇವೆ. ಆದ್ದರಿಂದ ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಆರ್ಥಿಕ ಸ್ವಾತಂತ್ರ್ಯವನ್ನೂ ಒದಗಿಸಿಕೊಳ್ಳಬೇಕಿದೆ. ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವುದು, ಪಾಲಿಸುವುದು ಎಂದರೆ ಸಾಮಾಜಿಕ ನ್ಯಾಯ, ಸಮಾನತೆ, ಬ್ರಾತೃತ್ವವನ್ನು ಪಾಲಿಸಬೇಕು ಎಂದರು.
ನಮ್ಮ ದೇಶದಲ್ಲಿ ಸಂವಿಧಾನ ವಿರೋಧಿಗಳೂ ಇದ್ದಾರೆ. ಈ ಎಚ್ಚರಿಕೆ ನಮಗೆ ಇರಬೇಕು. ಸಂವಿಧಾನ ಜಾರಿಗೆ ಹಿಂದೂ ಮಹಾ ಸಭಾದ ಸಾವರ್ಕರ್, ಗೋಳ್ವಾಳ್ಕರ್ ಕೂಡ ವಿರೋಧಿಸಿದ್ದರು. ಬಿಜೆಪಿಯ ಮಾತೃಪಕ್ಷ RSS ಕೂಡ ನಮ್ಮ ಸಂವಿಧಾನ ಜಾರಿಯನ್ನು ವಿರೋಧಿಸಿದ್ದರು.
ಬಾಬಾ ಸಾಹೇಬರ ಸಂವಿಧಾನ ಜಾರಿಗೂ ಮೊದಲು ಮನುಷ್ಯ-ಮನುಷ್ಯರನ್ನು ತಾರತಮ್ಯದಿಂದ ಶೋಷಿಸುವ, ಅಸಮಾನತೆಯನ್ನು ಆಚರಿಸುವ ಅನಾಗರಿಕ ವ್ಯವಸ್ಥೆ ಮತ್ತು ಶೂದ್ರರು-ದಲಿತರು-ಮಹಿಳೆಯರಿಗೆ ಶಿಕ್ಷಣವನ್ನು ವಿರೋಧಿಸುವ ಅಲಿಖಿತವಾದ ಮನುಸ್ಮೃತಿಯ ಪದ್ಧತಿಗಳು ಭಾರತದಲ್ಲಿ ಜಾರಿಯಲ್ಲಿತ್ತು. ಸಂವಿಧಾನ ವಿರೋಧಿಗಳು ಮತ್ತೆ ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸುತ್ತಿದ್ದಾರೆ ಎಂದು ಎಚ್ಚರಿಸಿದರು.