ನವದೆಹಲಿ: ಮಹಾರಾಷ್ಟ್ರ ಚುನಾವಣೆ ಅಂತ್ಯಗೊಂಡ ಬೆನ್ನಲ್ಲೇ ವರ್ಗಾವಣೆಗೊಂಡಿದ್ದ ಪೊಲೀಸ್ ಮಹಾನಿರ್ದೇಶಕಿ ಡಿಜಿಪಿ ರಶ್ಮಿ ಶುಕ್ಲಾ ಅವರನ್ನು ಡಿಜಿಪಿ ಸ್ಥಾನದಲ್ಲಿ ಮರು ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.
ಮಹಾರಾಷ್ಟ್ರ ಗೃಹ ಇಲಾಖೆ ಈ ಕುರಿತು ಸೋಮವಾರ ರಾತ್ರಿ ಆದೇಶ ಹೊರಡಿಸಿದೆ. ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷಗಳಿಗೆ ಡಿಜಿಪಿ ರಶ್ಮಿ ಶುಕ್ಲಾ ಸಹಾಯ ಮಾಡುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ವಿಪಕ್ಷಗಳು ಗಂಭೀರ ಆರೋಪ ಮಾಡಿದ್ದವು. ಅಲ್ಲದೇ ಅವರ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದವು.
ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಆಯೋಗ ರಶ್ಮಿ ಶುಕ್ಲಾ ಅವರನ್ನು ಡಿಜಿಪಿ ಸ್ಥಾನದಿಂದ ತಕ್ಷಣವೇ ವರ್ಗಾವಣೆ ಮಾಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಕುಮಾರ್ ವರ್ಮಾ ಹಂಗಾಮಿ ಡಿಜಿಪಿ ಆಗಿ ನೇಮಕಗೊಂಡಿದ್ದರು. ವರ್ಗಾವಣೆ ಆದೇಶದ ನಂತರ ರಶ್ಮಿ ಅವರಿಗೆ ಯಾವುದೇ ಹುದ್ದೆ ತೋರಿಸದೇ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿತ್ತು. ಸದ್ಯದ ಬೆಳವಣಿಗೆ ನಂತರ ಸಂಜಯ್ ಕುಮಾರ್ ವರ್ಮಾ ಅವರು ತಮ್ಮ ಹಿಂದಿನ ಸ್ಥಾನವನ್ನು ಅಲಂಕರಿಸಿದ್ದಾರೆ.