ಇಡೀ ದೇಶದಲ್ಲಿ ಬಹಳ ಭಕ್ತಿಭಾವದಿಂದ ಲಕ್ಷಾಂತರ ಭಕ್ತರು ದೇವರ ಸನ್ನಿಧಿಗೆ ತೆರಳುವ ಪವಿತ್ರ ಕ್ಷೇತ್ರಗಳಲ್ಲಿ ಶಬರಿಮಲೆಯೂ ಒಂದು. ಅಯ್ಯಪ್ಪನ ದಿವ್ಯ ಸಾನಿಧ್ಯಕ್ಕೆ ಹೋಗಲು ಭಕ್ತರು ಕಟ್ಟುನಿಟ್ಟಿನ ವ್ರತಗಳನ್ನ ಆಚರಣೆ ಮಾಡುತ್ತಾರೆ.
ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಪಡೆಯಲು ಭಕ್ತರು ಹಾತೊರೆಯುತ್ತಾರೆ. ಅದಕ್ಕೆ ಬಹುಮುಖ್ಯ ಕಾರಣ ಪವಿತ್ರ ಕ್ಷೇತ್ರದ ಮೇಲಿರುವ ಭಕ್ತಿಭಾವ. ಆದರೆ ಶಬರಿಮಲೆಯ ಪವಿತ್ರವಾದ 18 ಮೆಟ್ಟಿಲುಗಳ ಮೇಲೆ ನಿಂತು ಪೊಲೀಸರು ಪೋಸ್ ಕೊಟ್ಟಿದ್ದು ಹೊಸ ವಿವಾದಕ್ಕೆ ಗುರಿಯಾಗಿದೆ.
ಶಬರಿಮಲೆ ದೇವಾಲಯದ 18 ಮೆಟ್ಟಿಲುಗಳು ಅಯ್ಯಪ್ಪನ ಭಕ್ತರಿಗೆ ಪವಿತ್ರವಾದದ್ದು. 18 ಮೆಟ್ಟಿಲುಗಳಿಗೆ ಹೆಚ್ಚಿನ ಭಕ್ತಿ, ಗೌರವ ತೋರಲಾಗುತ್ತೆ. ಅರ್ಚಕರು ಮೆಟ್ಟಿಲುಗಳಿಗೆ ಪೂಜೆ ಮಾಡುವಾಗ ಮಾಡುವಾಗ ದೇವರಿಗೆ ಬೆನ್ನು ತೋರಿಸಲ್ಲ. ಆದರೆ ಪೊಲೀಸರು 18 ಮೆಟ್ಟಿಲುಗಳ ಮೇಲೆ ನಿಂತು ದೇವರಿಗೆ ಬೆನ್ನು ತೋರಿಸಿ ಅಪಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕೇರಳ ಪೊಲೀಸರು ಮಾಡಿರೋ ಯಡವಟ್ಟು ಶಬರಿಮಲೆ ಸಂಪ್ರದಾಯಕ್ಕೆ ವಿರುದ್ಧವಾದದ್ದು. ಪೊಲೀಸರು 18 ಮೆಟ್ಟಿಲುಗಳ ಮೇಲೆ ದೇವರ ಮುಂಭಾಗದಲ್ಲಿ ಬೆನ್ನು ತೋರಿಸಿ ನಿಂತಿದ್ದರ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಶಬರಿಮಲೆ ದೇವಾಲಯದ ಪವಿತ್ರ ಮೆಟ್ಟಿಲುಗಳ ಮೇಲೆ ನಿಂತು ಸುದೀರ್ಘವಾದ ಸಂಪ್ರದಾಯ, ಆಚಾರ, ವಿಚಾರದ ಉಲ್ಲಂಘನೆ ಮಾಡಲಾಗಿದೆ. ಇದು ದೇವಾಲಯದ ಸಂಪ್ರದಾಯಕ್ಕೆ ವಿರುದ್ಧವಾಗಿದ್ದು ಪೊಲೀಸರ ನಡೆಗೆ ಹಿಂದೂ ಸಂಘಟನೆಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.