“ಹೆಗಲಿಗೆ ಹೆಗಲಾಗಿ, ಜನತೆಗೆ ಆಳಾಗಿ ದುಡಿಯೋಣ, ನೀವು ಸಿಡಿಲುಮರಿಗಳಾಗಿ” – ಸೋಲಿನ ಬಳಿಕ ಕಾರ್ಯಕರ್ತರಿಗೆ ನಿಖಿಲ್ ಪತ್ರ

WhatsApp
Telegram
Facebook
Twitter
LinkedIn

ಬೆಂಗಳೂರು : ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸೋಲಿನ ಬಳಿಕ ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರಿಗಾಗಿ ಎರಡು ಪುಟಗಳ ಪತ್ರ ಬರೆದಿದ್ದಾರೆ. ಸೋಲಿನಿಂದ ಹತಾಶರಾಗೋದು ಬೇಡ, ಹಾಗೇ ವಿಪಕ್ಷಗಳಿಗೆ ಪತ್ರದಲ್ಲಿ ತಕ್ಕ ತಿರುಗೇಟು ನೀಡಿದ್ದಾರೆ. ಗೆಲುವು ಕಂಡ ಕಾಂಗ್ರೆಸ್ ಪಕ್ಷ ಆ ಗೆಲುವಿನಲ್ಲಿಯೂ ವಿಕೃತಿ ಮೆರೆಯುತ್ತಿದೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ ಹೊರಬಿದ್ದ ಮೇಲೆ ಕಾರ್ಯಕರ್ತರಿಗೆ ದೀರ್ಘ ಪತ್ರ ಬರೆದಿರುವ ನಿಖಿಲ್ ಜೆಡಿಎಸ್ ಶಾಸಕರನ್ನು ಖಾಲಿ ಮಾಡಿಸುತ್ತೇನೆ ಎಂದು ಹೇಳಿರುವ ಸಿ.ಪಿ.ಯೋಗೇಶ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ಕಾಂಗ್ರೆಸ್ ನಾಯಕರಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿರುವ ನಿಖಿಲ್ ಅವರು, ನಿಖಿಲ್‌ ಬಚ್ಚಾ.. ಪಾಪ ನಿಖಿಲ್‌..ಎಂಬ ಅನುಕಂಪಕ್ಕೆ ತುತ್ತಾಗಿ ಕೈ ಚೆಲ್ಲುವ ಬಾಲಬುದ್ಧಿಯ ಮನಸ್ಥಿತಿಯವನಲ್ಲ ನಾನು ಎಂದು ಕುಟುಕಿದ್ದಾರೆ. ಅಲ್ಲದೆ ಕೇವಲ ಸ್ವಾರ್ಥಕ್ಕಾಗಿ, ಅಧಿಕಾರದ ಹಪಾಹಪಿಗಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ, ಎಲ್ಲಿ ಹೆಚ್ಚು ಪ್ಯಾಕೇಜ್‌ ಸಿಕ್ಕಿದರೆ ಅಲ್ಲಿಗೆ ಹಾರಿ ಜೇಬು ಭರ್ತಿ ಮಾಡಿಕೊಳ್ಳುವ ರಾಜಕೀಯ ವ್ಯಾಪಾರಿಗಳಲ್ಲ ನಮ್ಮ ಶಾಸಕರು.

ಗೆದ್ದಲು ಕಟ್ಟಿದ ಹುತ್ತದೊಳಕ್ಕೆ ಹಾವಿನಂತೆ ಹೊಕ್ಕು, ಕೈಹಿಡಿದವರನ್ನೇ ಕಚ್ಚಿ, ವಿಷಕಾರುವ ರಾಜಕೀಯ ವಿಷಜಂತುಗಳಿಗೆ ನಾವು ಹೆದರುವುದಿಲ್ಲ ಎಂದು ಯೋಗೇಶ್ವರ್ ಮೇಲೆ ಚಾಟಿ ಬೀಸಿದ್ದಾರೆ. ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ #NDA ಅಭ್ಯರ್ಥಿಯಾಗಿದ್ದ ನನ್ನ ಸೋಲು ಅನಿರೀಕ್ಷಿತ. ಸೋಲು ಯಾಕಾಯಿತೆಂದು ಈಗಾಗಲೇ ಕಾರಣ ಕೊಟ್ಟಿದ್ದೇನೆ. ಹಾಗೆಂದು, ಸೋಲಿಗೆ ಹೆದರಿ ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ, ನಮ್ಮ ಪಕ್ಷದ್ದೂ ಅಲ್ಲ. ಇಂಥ ಅನೇಕ ಸೋಲುಗಳನ್ನು ಪಕ್ಷ ಜೀರ್ಣಿಸಿಕೊಂಡಿದೆ. ಸತತ ಹೋರಾಟಗಳ ಮೂಲಕ ಪಕ್ಷವು ಫೀನಿಕ್ಸ್‌ನಂತೆ ಎದ್ದು ಬಂದಿದೆ. ಪಕ್ಷದ ಇಂತಹ ಅನೇಕ ಏಳುಬೀಳಿನ ದಾರಿಯಲ್ಲಿ ನಾನೊಬ್ಬ ಸಣ್ಣ ಪಯಣಿಗ. ಅಷ್ಟಾಗಿಯೂ ಅನೇಕ ನಾಯಕರನ್ನು ಪಕ್ಷವು ರಾಜ್ಯಕ್ಕೆ ಧಾರೆಯೆರೆದು ಕೊಟ್ಟಿದೆ, ಅದು ಮಣ್ಣಿನಮಗ ಪೂಜ್ಯ ದೇವೇಗೌಡರ ಗರಡಿಯ ಫಲ ನನ್ನ ಕಾರ್ಯಕರ್ತ ಬಂಧುಗಳಿಗೆ ನಾನು ಹೇಳುವುದಿಷ್ಟೇ.., ರಣರಂಗದಲ್ಲಿ ಸೋಲು ಗೆಲುವು ಸಹಜ. ಶಕುನಿ ರಾಜನೀತಿಗೆ ಹೆದರಿ ಪಲಾಯನ ನನ್ನ ನಡೆಯಲ್ಲ.

ಹಾಗೆಂದು, ಯಾರಿಗೂ ಸವಾಲು ಹಾಕುವ ಅಗತ್ಯವೂ ಇಲ್ಲ. ನಮ್ಮ ಪಕ್ಷವೇನು? ನಾಯಕತ್ವದ ಬಲವೇನು? ಛಲದಂಕಮಲ್ಲರಾದ ನಿಮ್ಮಗಳ ಶಕ್ತಿಯೇನು? ಎಂಬುದನ್ನು ಮುಂದಿನ ಚುನಾವಣೆಯಲ್ಲಿ ತೋರಿಸೋಣ. ಪಕ್ಷವನ್ನು ಮರಳಿ ಕಟ್ಟೋಣ, ಬೀದಿಯಲ್ಲಿ ನಿಂತು ಜನಪರವಾಗಿ ಹೊರಾಡೋಣ. ನಾವು ಸತ್ಯದ ಪರವಾಗಿದ್ದೇವೆ. ಸತ್ಯಮೇವ ಜಯತೆ ಎನ್ನುವುದು ನಮ್ಮ ಪಾಲಿಗೆ ಬರೀ ಜಾಹೀರಾತಿನ ಸ್ಲೋಗನ್ ಅಲ್ಲ, ರಾಷ್ಟ್ರಪಿತ ಬಾಪೂಜಿ ಹೇಳಿದ ಸತ್ಯ ಮಾರ್ಗದಲ್ಲಿಯೇ ನಡೆಯೋಣ. ಆ ಮರ್ಯಾದಾ ಪುರುಷೋತ್ತಮ ರಾಮನ ದಾರಿ ನಮ್ಮ ಆದರ್ಶ. ಶ್ರೀಕೃಷ್ಣ ಪರಮಾತ್ಮನ ಸತ್ಯನೀತಿ ನಮ್ಮ ಮುಂಬೆಳಕು. ನಾವು ಯಾರೂ ಧೃತಿಗೆಡಬೇಕಿಲ್ಲ, ನಿಮ್ಮೊಂದಿಗೆ ನಾನಿದ್ದೇನೆ. ಇಡೀ ಪಕ್ಷವೇ ಇದೆ. ಹೆಗಲಿಗೆ ಹೆಗಲಾಗಿ ಭೂ ತಾಯಿಗೆ ನೊಗವಾಗಿ ಜನತಾ ಜನಾರ್ದನನಿಗೆ ಆಳಾಗಿ ದುಡಿಯೋಣ, ಧಣಿವಿಲ್ಲದೆ ಕಲಿಗಳಾಗಿ ಸಿಡಿಲುಮರಿಗಳಾಗಿ ಎಂದು ಕಾರ್ಯಕರ್ತರಿಗೆ ಹುರುಪು ತುಂಬಿದ್ದಾರೆ ನಿಖಿಲ್ ಕುಮಾರಸ್ವಾಮಿ…

BC Suddi   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon