ಚಿತ್ರದುರ್ಗ: ಸ್ವಾತಂತ್ರ್ಯಯ, ಶಿಕ್ಷಣ, ಸಮಾನತೆಯನ್ನು ದೇಶದಾದ್ಯಂತ ಹಂಚುವ ನೆಲೆಗಟ್ಟಿನಲ್ಲಿ ಬುದ್ಧ, ಬಸವ, ಅಂಬೇಡ್ಕರ್ ರವರ ಆಶಯಗಳನ್ನು ಅಧಾರವಾಗಿಸಿಕೊಂಡು ಅಂಬೇಡ್ಕರ್ ರಚಿಸಿದ ಸಂವಿಧಾನ ಶ್ರೇಷ್ಠವಾದುದು. ಬಾಬಾ ಸಾಹೇಬರು ನೀಡಿದ ಈ ಸಂವಿಧಾನದಿಂದ ನಮ್ಮ ಬದುಕು ಹಸನಾಗಿದೆ ಎಂದು ಸಾಹಿತಿ ಹೆಚ್. ಆನಂದ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಮೆದೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಅಂತ್ಯೋದಯ ಕಲ್ಚರಲ್ ಪೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ “ಸಂವಿಧಾನ ಸಮರ್ಪಣಾ ದಿನ ಹಾಗೂ ಸಂವಿಧಾನ ಜಾಗೃತಿ ಅಭಿಯಾನ ಕಾರ್ಯಕ್ರಮ” ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ ಎಂಬುದನ್ನರಿತ ಅಂಬೇಡ್ಕರ್, ಕೆಲವು ವರ್ಗಗಳಿಗೆ ಮಾತ್ರ ಸೀಮಿತವಾಗಿದ್ದ ಶಿಕ್ಷಣವನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಿಗುವಂತೆ ಮಾಡಿದರು. ಶಿಕ್ಷಣದ ಮಹತ್ವವನ್ನು ತಿಳಿಸುವ ಮೂಲಕ ಜನ ಸಾಮಾನ್ಯರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತಂದವರು ಬಾಬಾ ಸಾಹೇಬರು. ಆಗಾಗಿ ನಾವು ಮತ್ತಷ್ಟು ಗುಣಾತ್ಮಕ, ಮಾನವ ಪರವಾದ ಬದುಕು ನಮ್ಮದಾಗಬೇಕು. ಈ ಹಿನ್ನೆಲೆಯಲ್ಲಿ ಅವರ ಆಶಯಗಳನ್ನು ಸಾಕರಗೊಳಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಪ್ರಸಾರ ಭಾರತಿ ಆಕಾಶವಾಣಿಯ ನವೀನ್ ಮಸ್ಕಲ್ ಮಾತನಾಡಿ, ಭಾರತ ಎಂದರೆ, ಬಹುತ್ವದ ನೆಲೆ. ಸಾವಿರಾರು ಜಾತಿ, ಮತ, ಪಂಥ, ಇದ್ದಾಗಿಯೂ ನಾವು ವಿಶ್ವ ಬ್ರಾತೃತ್ವದಲ್ಲಿ ಐಕ್ಯತೆಯೊಂದಿಗೆ ಬದುಕುವುದರ ಜೊತೆಗೆ, ಮಾನವ ಪರ ಆಶಯಗಳನ್ನು ಸಂವಿಧಾನದ ನೆಲೆಯಲ್ಲಿ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಅಕ್ಷರ ಎಂದರೆ “ಅದು ಬರೀ ಅಕ್ಷರವಲ್ಲ, ಅರಿವಿನ ಗುರು”. ಈ ಅರಿವಿನ ಮೂಲಕ ಜ್ಞಾನ ಸೂರ್ಯರಾದವರು ಅಂಬೇಡ್ಕರ್. “ಜ್ಞಾನ ಜಗತ್ತನ್ನು ಆಳುತ್ತದೆ” ಎಂಬುದಕ್ಕೆ ಬಹುದೊಡ್ಡ ನಿದರ್ಶನ ಅಂಬೇಡ್ಕರ್ ಜೀವನವೇ ಸಾಕ್ಷಿ ಎಂದರು.
ಅಂತ್ಯೋದಯ ಕಲ್ಚರಲ್ ಪೌಂಡೇಷನ್ ಅಧ್ಯಕ್ಷ ಡಿ.ಓ.ಮುರಾರ್ಜಿ ಮಾತನಾಡಿ , ಸಮಾಜದಲ್ಲಿ ಅನೇಕರಿಗೆ ಸಂವಿಧಾನದ ಬಗ್ಗೆ ಮಾಹಿತಿ ಕೊರತೆ ಇದೆ. ಆದ್ದರಿಂದ ಸಂವಿಧಾನದ ಆಶಯ, ನೀತಿ – ನಿಯಮಗಳನ್ನು ವಿದ್ಯಾರ್ಥಿ, ಯುವಜನತೆ ಹಾಗೂ ಮಹಿಳೆಯರಿಗೆ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಭಟ್ರಹಳ್ಳಿ ಧನಂಜಯ ಅಂಬೇಡ್ಕರ್ ಗೀತೆ ಹಾಡಿದರು. ಶಿಕ್ಷಕ ಪಿ.ನವೀನ್ ಸ್ವಾಗತಿಸಿ, ನಿರೂಪಿಸಿದರು. ಹಿನ್ನೆಲೆ ಗಾಯಕ ಡಿ. ಪಿ. ನಿಂಗರಾಜು ವಂದಿಸಿದರು.
ಪ್ರಭಾರ ಮುಖ್ಯ ಶಿಕ್ಷಕ ಅಧ್ಯ್ಯಕ್ಷೇತೆ ವಹಿಸಿದ್ದರು. ಚುಟುಕು ಸಾಹಿತಿ ವಿನಾಯಕ್, ಶಿಕ್ಷಕಿ ಜಯಶೀಲಮ್ಮ, ಕಲಾವಿದ ಜಯಣ್ಣ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.