ಚಿತ್ರದುರ್ಗ : ಶಿಕ್ಷಕರ ವೃತ್ತಿ ಕಲುಷಿತಗೊಂಡಿದೆ. ಮೇಷ್ಟ್ರುಗಳು ರಾಜಕಾರಣ ಮಾಡುತ್ತ ದೇಶ ಹಾಳು ಮಾಡುತ್ತಿದ್ದಾರೆಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಹೇಳಿದರು.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಬಿ.ಇ.ಡಿ. ನಾಲ್ಕನೆ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಬುಧವಾರ ಏರ್ಪಡಿಸಲಾಗಿದ್ದ ನೆನಪಿನ ಹೆಜ್ಜೆಗಳು ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಉಪಕಾರ ಸ್ಮರಣೆ ಇಂದಿನ ಪೀಳಿಗೆಯಲ್ಲಿ ಕಡಿಮೆಯಾಗಿದೆ. ಗುರಿ, ಆಸೆ, ಆಕಾಂಕ್ಷೆ, ದುರಾಸೆ, ಚಟ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಸೃಷ್ಠಿಯನ್ನು ನಂಬಬೇಕು. ಸೃಷ್ಟಿಯ ವಿರುದ್ದ ಯಾರು ಹೋಗಬಾರದು. ಕಠಿಣ ಪರಿಶ್ರಮದಿಂದ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ. ಉಪಕಾರವನ್ನು ಮಾಡಿದವರನ್ನು ಮರೆತರೆ ಅಂತಹ ಮನುಷ್ಯ ಏಳಿಗೆಯಾಗುವುದಿಲ್ಲ ಎಂದು ತಿಳಿಸಿದರು.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಬೆಳೆದಿರುವುದು ಬಿ.ಇ.ಡಿ. ಕಾಲೇಜಿನಿಂದ ಜೀವನದಲ್ಲಿ ಯಶಸ್ವಿಯಾದವರಿಗೆ ಬದುಕುವ ಹಕ್ಕಿದೆ. ಪ್ರತಿದಿನ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಬೇಕೆಂದು ಬಿ.ಇ.ಡಿ. ಪ್ರಶಿಕ್ಷಣಾರ್ಥಿಗಳಿಗೆ ಎಂ.ಸಿ.ರಘುಚಂದನ್ ಕರೆ ನೀಡಿದರು.
ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಇ.ಭೈರಸಿದ್ದಪ್ಪ ಮಾತನಾಡಿ ಶಿಕ್ಷಣವೆಂದರೆ ಸ್ಪರ್ಧೆ. ಪ್ರತಿಯೊಂದು ರಂಗದಲ್ಲಿಯೂ ಪೈಪೋಟಿರುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪಷ್ಠವಾದ ಗುರಿ, ನಿಖರತೆಯಿರಬೇಕು. ತರಬೇತಿಯಿಂದ ಪರಿಪೂರ್ಣ ವ್ಯಕ್ತಿತ್ವ ನಿಮ್ಮದಾಗುತ್ತದೆ. ಬಿ.ಇ.ಡಿ. ಶಿಕ್ಷಣದಲ್ಲಿ ವೈವಿದ್ಯಮಯ ಚಟುವಟಿಕೆಯಿರುತ್ತದೆ. ಪ್ರಶಿಕ್ಷಣಾರ್ಥಿಗಳಾಗಿರುವ ಸಂದರ್ಭದಲ್ಲಿ ಕಠಿಣವಿರುತ್ತದೆ. ತಾಳ್ಮೆಯಿಂದ ಇರಬೇಕು ಎಂದು ಹೇಳಿದರು.
ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಬಿ.ಸಿ.ಅನಂತರಾಮು, ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ಕೆ.ಪಿ.ನಾಗಭೂಷಣ್ಶೆಟ್ಟಿ, ಆರ್.ಎಸ್.ರಾಜು, ಡಾ.ಜಿ.ಬಿ.ರಾಜಪ್ಪ, ವಿ.ಪ್ರಕಾಶ್, ಡಾ.ಬಿ.ಚಂದ್ರಪ್ಪ ಇವರುಗಳು ವೇದಿಕೆಯಲ್ಲಿದ್ದರು. ಗ್ರಂಥಪಾಲಕ ಸಿ.ಬಸವರಾಜು, ಸಹಾಯಕ ಪ್ರಾಧ್ಯಾಪಕ ಡಾ.ಲಿಂಗರಾಜ್ ಹಂಚಿನಮನಿ ಹಾಗೂ ಬಿ.ಇ.ಡಿ.ವಿದ್ಯಾರ್ಥಿಗಳು ಬೀಳ್ಕೊಡುಗೆ ಸಮಾರಂಭದಲ್ಲಿ ಹಾಜರಿದ್ದರು.