ರಾಂಚಿ: ಜಾರ್ಖಂಡ್ ಖುಂಟಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕೆಲಸ ಮಾಡುವ ಯುವಕನೋರ್ವ ತನ್ನ ಪ್ರೇಯಸ್ಸಿಯನ್ನು ಕೊಂದು ಈಕೆಯ ದೇಹವನ್ನು 40 ರಿಂದ 50 ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು 25 ವರ್ಷದ ನರೇಶ್ ಭೇಂಗ್ರಾ ಎಂದು ಗುರುತಿಸಲಾಗಿದೆ. ಜರಿಯಾಗಢ ಪೊಲೀಸ್ ಠಾಣೆಯ ಜೋರ್ದಾಗ್ ಗ್ರಾಮದ ಬಳಿಯಲ್ಲಿ ನವೆಂಬರ್ 24 ರಂದು ಬೀದಿ ನಾಯಿಯೊಂದು ಮಾನವ ದೇಹದ ಭಾಗಗಳೊಂದಿಗೆ ಪತ್ತೆಯಾದಾಗ ಹತ್ಯೆಯಾದ ಹದಿನೈದು ದಿನಗಳ ನಂತರ ವಿಷಯ ಬೆಳಕಿಗೆ ಬಂದಿದೆ.
ನರೇಶ್ ಭೇಂಗ್ರಾ 2 ವರ್ಷಗಳಿಂದ ತಮಿಳುನಾಡಿನ ಖುಂಟಿ ಜಿಲ್ಲೆಯ 24ರ ಹರೆಯದ ಯುವತಿಯೊಂದಿಗೆ ಭೇಂಗ್ರಾ ಲಿವ್-ಇನ್ ಸಂಬಂಧದಲ್ಲಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಆತ ತನ್ನ ಪ್ರೇಯಸ್ಸಿಗೂ ತಿಳಿಸದೇ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದ. ಬಳಿಕ ಪತ್ನಿಯನ್ನು ಜಾರ್ಖಂಡ್ ನಲ್ಲಿ ಬಿಟ್ಟು ತಮಿಳುನಾಡಿಗೆ ಮರಳಿದ್ದ. ತನ್ನ ಪ್ರೇಯಸ್ಸಿಯನ್ನು ಜರಿಯಾಗಡ್ ಪೊಲೀಸ್ ಠಾಣೆಯ ಜೋರ್ದಾಗ್ ಗ್ರಾಮದ ತನ್ನ ಮನೆಯ ಸಮೀಪವಿರುವ ಕಾಡಿಗೆ ಕರೆದೊಯ್ದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಆಕೆಯನ್ನು ಕೊಲ್ಲುವ ಮುನ್ನ ಅತ್ಯಾಚಾರ ಎಸಗಿದ್ದು, ನಂತರದಲ್ಲಿ ಕತ್ತು ಹಿಸುಕಿ ಕೊಲ್ಲಲಾಗಿದೆ. ಬಳಿಕ ಚೂಪಾದ ಆಯುಧಗಳೊಂದಿಗೆ ಆಕೆಯ ದೇಹವನ್ನು 40 ರಿಂದ 50 ತುಂಡುಗಳಾಗಿ ಕತ್ತರಿಸಿ ಅಲ್ಲಿಂದ ಊರಿಗೆ ತೆರಳಿ ತನ್ನ ಪತ್ನಿಯ ಜತೆ ವಾಸವಾಗಿದ್ದ” ಎಂದು ಖುಂಟಿ ಪೊಲೀಸ್ ವರಿಷ್ಠಾಧಿಕಾರಿ ಅಮನ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.
ಮೃತದೇಹದ ಅಂಗಾಂಗಗಳು ಪತ್ತೆಯಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸದ ಮೂಲಗಳು ತಿಳಿಸಿವೆ. ಇನ್ನು ಕೊಲೆಯಾದ ಮಹಿಳೆಯ ಆಧಾರ್ ಕಾರ್ಡ್ ಸೇರಿದಂತೆ ಸಾಮಾನುಗಳಿದ್ದ ಬ್ಯಾಗ್ ಕೂಡ ಕಾಡಿನಲ್ಲಿ ಪತ್ತೆಯಾಗಿದೆ. ಮಹಿಳೆಯ ತಾಯಿಯನ್ನು ಸ್ಥಳಕ್ಕೆ ಕರೆಸಿದಾಗ ಅವರು ತಮ್ಮ ಮಗಳ ವಸ್ತುಗಳನ್ನು ಗುರುತಿಸಿದ್ದಾರೆ ಎನ್ನಲಾಗಿದೆ.