ಕಡಲೇಕಾಯಿ ಬೀಜಗಳು ಬಲು ರುಚಿಯಾಗಿರುವುದಲ್ಲದೇ ಆರೋಗ್ಯಕರವೂ ಹೌದು. ತೂಕ ಕಳೆದುಕೊಳ್ಳಲು, ಜೀರ್ಣಂಗಗಳ ಆರೋಗ್ಯಕ್ಕೆ, ಅಥವಾ ಹೊಟ್ಟೆ ತುಂಬಲು ಕಡಲೇಕಾಯಿ ಹೇಳಿ ಮಾಡಿಸಿದ ತಿನಿಸು.
ಆದರೆ ಕೆಲವರು ಕಡಲೇಕಾಯಿಯ ಚಟ ಅಂಟಿಸಿಕೊಂಡು, ತೀರಾ ಅದರಿಂದಲೇ ಆರೋಗ್ಯ ಹಾಳು ಮಾಡಿಕೊಂಡು ಬಿಡುತ್ತಾರೆ. ಪಥ್ಯ ತಜ್ಞ ರಜತ್ ಜೈನ್ ಕಡಲೇಕಾಯಿಗಳ ಆರೋಗ್ಯಪೂರ್ಣ ಪ್ರಮಾಣಗಳ ಕುರಿತು ಹೀಗೆ ಮಾತನಾಡಿದ್ದಾರೆ: “ಬಾದಾಮಿಗೆ ಸಮನಾದ ಕಡಲೇಕಾಯಿಯಲ್ಲಿ ಭಾರೀ ಪ್ರಯೋಜನಗಳಿವೆ. ಆದರೆ ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕೆಂಬುದು ಗೊಂದಲದ ವಿಚಾರ.
ಕಡಲೇಕಾಯಿಗಳು ನಿಮಗೆ ಪ್ರೋಟೀನ್, ವಿಟಮಿನ್‌ಗಳು, ಖನಿಜಗಳು ಹಾಗೂ ಆರೋಗ್ಯಕರ ಕೊಬ್ಬಿನಂಶ ನೀಡುವುದರೊಂದಿಗೆ 30 ಅತ್ಯವಶ್ಯಕ ವಿಟಮಿನ್‌ಗಳು ಹಾಗೂ ಖನಿಜಗಳನ್ನು ಹೊಂದಿವೆ. ಕಡಲೇಕಾಯಿ ನಾರಿನಂಶದ ಉತ್ತಮ ಮೂಲ. ಚಳಿಗಾಲದಲ್ಲಿ ಪ್ರತಿನಿತ್ಯ 30-40 ಗ್ರಾಂ ಕಡಲೇಕಾಯಿ ಸೇವನೆಯಿಂದ ತೂಕ ಕಳೆದುಕೊಳ್ಳಲು ಅನುವಾಗುವುದಲ್ಲದೇ, ಹಸಿವನ್ನು ನಿಯಂತ್ರಣದಲ್ಲಿಟ್ಟು, ನಿಮ್ಮ ಹೊಟ್ಟೆ ತುಂಬಿದಂತೆ ಬಹುಕಾಲ ಇಡಬಲ್ಲದಾಗಿದೆ.”
ಕಡಲೇಕಾಯಿಯಲ್ಲಿರುವ ಆರೋಗ್ಯಕರ ಕೊಬ್ಬಿನಂಶದ ಜೊತೆಗೆ ಮ್ಯಾಗ್ನೇಶಿಯಂ, ಆಂಟಿಆಕ್ಸಿಡೆಂಟ್ಸ್, ತಾಮ್ರ ಮತ್ತು ಇತರೆ ಅತ್ಯವಶ್ಯಕ ಪೋಷಕಾಂಶಗಳು ಅದನ್ನು ಆರೋಗ್ಯಕರ ಆಹಾರವನ್ನಾಗಿ ಮಾಡಿದೆ.
ಮಧುಮೇಹ ರೋಗಿಗಳಿಗೆ, ಆಹಾರ ಹೊಟ್ಟೆಯೊಳಗೆ ಜೀರ್ಣಗೊಂಡು ರಕ್ತದ ಹರಿವಿನಲ್ಲಿ ಸೇರಿಕೊಂಡು ದೇಹದಲ್ಲಿರುವ ಗ್ಲೂಕೋಸ್ ಮಟ್ಟದ ಮೇಲೆ ಪರಿಣಾಮ ಬೀರುವ ದರವಾದ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುವ ಪಥ್ಯ ಬೇಕಾಗುತ್ತದೆ. ಕಡಲೇಕಾಯಿಯಲ್ಲಿ ಕಡಿಮೆ ಮಟ್ಟದಲ್ಲಿ ಗ್ಲೈಸೆಮಿಕ್ ಸೂಚ್ಯಂಕವಿದ್ದು, ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಅದು ವ್ಯಾಪಕವಾಗಿ ಏರಿಸುವುದಿಲ್ಲ. ಟೈಪ್-2 ಮಧುಮೇಹದಿಂದ ಬಳಲುತ್ತಿರುವ ಮಹಿಳೆಯರಿಗೆ ಕಡಲೇಕಾಯಿ ಉತ್ತಮವಾಗಿದೆ ಎಂದು ಅಧ್ಯಯನಗಳು ತಿಳಿಸುತ್ತವೆ.
ಕಡಲೇಕಾಯಿಯಲ್ಲಿ ನಾರಿನಂಶ ಜೋರಾಗಿರುವ ಕಾರಣ ಜೀರ್ಣಾಂಗದ ಆರೋಗ್ಯಕ್ಕೆ ಒಳ್ಳೆಯ ಆಯ್ಕೆಯಾಗಿದೆ. ಈ ಮೂಲಕ ಹೊಟ್ಟೆ ಕಟ್ಟುವುದು ತಪ್ಪುವುದಲ್ಲದೇ, ಗಟ್ ಮೈಕ್ರೋಬಯೋಮ್ ಸುಧಾರಿಸಲು ಸಹಾಯವಾಗುತ್ತದೆ. ಕಡಲೇಕಾಯಿ ಸೇವನೆಯಿಂದ ಉರಿಯೂತದ ಸಾಧ್ಯತೆ ಕಡಿಮೆ ಇರುವ ಕಾರಣ ರೋಗಗಳು ಸಂಭವಿಸುವ ಸಂಭವಗಳು ಕಡಿಮೆಯಾಗುತ್ತವೆ.