ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಒಬ್ಬ ಸುಳ್ಳುಗಾರ ಅವರ ಪರ 2014ರಲ್ಲಿ ಪ್ರಚಾರ ಮಾಡಿದ್ದಕ್ಕೆ ನಾನು ಪ್ರಾಯಶ್ಚಿತ ಮಾಡಿಕೊಳ್ಳುತ್ತೇನೆ ಎಂದು ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
‘ಸುಬ್ರಮಣಿಯನ್ ಸ್ವಾಮಿ ಅವರು ರಾಹುಲ್ ಗಾಂಧಿ ಅವರ ಪೌರತ್ವದ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿ 2015ರಿಂದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಇದು ಈಗ ನ್ಯಾಯಾಲಯದಲ್ಲಿದೆ. ಮೋದಿ ಅವರು ರಾಹುಲ್ ಅವರನ್ನು ರಕ್ಷಿಸುತ್ತಿದ್ದಾರೆ’ ಎಂದು ವಿರಾಟ್ ಹಿಂದೂಸ್ತಾನ್ ಸಂಗಮ್ (ವಿಎಚ್ಎಸ್) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದರು.
ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಸ್ವಾಮಿ, ಪ್ರಧಾನಿ ಮೋದಿ ವಿರುದ್ಧ ಬೇಸರ ಹೊರಹಾಕಿದ್ದಾರೆ. ‘ಮೋದಿ ಅಕ್ಬರ್ ಎಂದಾದರೆ, ಆತನಿಗೆ ಸರಸ್ವವನ್ನೂ ಸಮರ್ಪಿಸುವ ಬೀರ್ಬಲ್ ಆಗಲು ನಾನು ಒಪ್ಪುವುದಿಲ್ಲ. ಪ್ರಧಾನಿಯಾದ ಮೊದಲ 15 ದಿನಗಳಲ್ಲಿ ವಿದೇಶಿ ಬ್ಯಾಂಕ್ಗಳಲ್ಲಿನ ಕಪ್ಪು ಹಣವನ್ನು ಮರಳಿ ಸ್ವದೇಶಕ್ಕೆ ತರುವುದಾಗಿ ಮೋದಿ ಭರವಸೆ ನೀಡಿದ್ದರು. ಅದು ಈವರೆಗೆ ಸಾಧ್ಯವಾಗಿಲ್ಲ. 2014ರಲ್ಲಿ ಅವರ ಪರ ಪ್ರಚಾರ ಮಾಡಿದ್ದಕ್ಕಾಗಿ ನಾನು ಪ್ರಾಯಶ್ಚಿತ ಮಾಡಿಕೊಳ್ಳುತ್ತೇನೆ’ ಎಂದು ಸುಬ್ರಮಣಿಯನ್ ಸ್ವಾಮಿ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.