ಚಿತ್ರದುರ್ಗ: ಜಿಲ್ಲೆಯ ಗೊಲ್ಲರಹಟ್ಟಿಗಳಲ್ಲಿ ಇನ್ನೂ ಮೌಡ್ಯಾಚರಣೆಗಳು ಜೀವಂತವಾಗಿವೆ. ಇದಕ್ಕೊಂದು ತಾಜಾ ಉದಾಹರಣೆ ಚಿತ್ರದುರ್ಗ ತಾಲ್ಲೂಕು, ಭರಮಸಾಗರ ಹೋಬಳಿಯ ತುರೆಬೈಲು ಗೊಲ್ಲರಹಟ್ಟಿ ಕಂಡುಬಂದಿದೆ. ತಿಂಗಳ ಮುಟ್ಟಾದ ಮಹಿಳೆಯನ್ನು ಸ್ವಂತದವರೇ ಮನೆಯಿಂದ ಹೊರ ಹಾಕಿದ್ದಾರೆ.
ಮಹಿಳೆಯರ ಜೀವ ವಿಕಾಸ ಕ್ರಿಯೆಯಲ್ಲಿ ಮುಟ್ಟಾಗುವಿಕೆ ನೈಸರ್ಗಿಕ ಕ್ರಿಯೆ. ದೈಹಿಕವಾಗಿ ಮಹಿಳೆಗೆ ದೊರೆತ ವರವದು. ಸಮಸ್ತ ಮಹಿಳೆಯರಿಗೆ ಮುಟ್ಟಾಗುವಿಕೆ ನಿಂತರ! ಮಾನವ ಸಂತತಿಗೆ ಕುತ್ತು! ಆದರೆ ಮಹಿಳೆ ಮುಟ್ಟಾಗುವುದನ್ನೇ ಪಾಪ ಎನ್ನುವಂತೆ ನೋಡುವ ಅಮಾನುಷ ಮೌಡ್ಯಾಚರಣೆ ಗೊಲ್ಲರಹಟ್ಟಿಗಳಲ್ಲಿ ಬೆಳದು ಬಂದಿದೆ. ಮುಟ್ಟಾದ ಸಂದರ್ಭದಲ್ಲಿ ಹೆಚ್ಚಿನ ಕಾಳಜಿಯ ಅವಶ್ಯಕತೆ ಇರುತ್ತದೆ. ಆದರೆ ಮುಟ್ಟಾದ ಮಹಿಳೆಯನ್ನು ಕಳಂಕಿತೆ ಎನ್ನುವಂತೆ ನೋಡುವ ಮನೋಭಾವ ಇರುವುದೇ ಖೇಧಕರ.!21ನೇ ಶತಮಾನದ ಕಾಲಾಯುಷ್ಯ ಮುಗಿಯುವ ಹಂತ ಬಂದರೂ, ಜಿಲ್ಲೆಯಲ್ಲಿ ಇಂತಹ ಅನಿಷ್ಠ ಪದ್ದತಿಗಳ ಬೇರು ಇನ್ನೂ ಗಟ್ಟಿಯಾಗಿರುವುದು, ಭಾರತೀಯ ಸಮಾಜದಲ್ಲಿ ಸಾಮಾಜಿಕ ಚಲನೆಯ ಮಂದಗತಿಗೆ ಹಿಡಿದ ಕೈಗನ್ನಡಿ. ಸ್ವಾಂತ್ರತ್ಯ, ಆಧುನಿಕತೆ ವಿದ್ಯುತ್, ಟಿ.ವಿ., ರಸ್ತೆ ಸಂಪರ್ಕ ಗೊಲ್ಲರಹಟ್ಟಿಗಳಿಗೆ ತಲುಪಿದೆ. ಆದರೆ ಇವು ಮೌಡ್ಯವನ್ನೇ ಸಂಪ್ರದಾಯ ಎಂದು ಭಾವಿಸಿದ ಜಡ್ಡು ಗಟ್ಟಿದ ಜನರು ಮುಖ್ಯವಾಹಿನಿಗೆ ತರುವಲ್ಲಿ ವಿಫಲವಾಗಿವೆ.
ಇಂತಹ ಅನಿಷ್ಠ ಮೌಡ್ಯಾಚಾರಣೆಯನ್ನು ತೊಡದು ಹಾಕಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಶಿಶು ಅಭಿವೃದ್ಧಿ ಯೋಜನೆ ಇಲಾಖೆಗಳು ಸತತವಾಗಿ ಪ್ರಯತ್ನ ಪಡುತಿದ್ದಾರೆ. ಇದರ ಅಂಗವಾಗಿಯೇ ತುರೆಬೈಲು ಗೊಲ್ಲರಹಟ್ಟಿಯಲ್ಲಿ ಮೌಡ್ಯ ಪದ್ಧತಿ ಹಾಗೂ ಆಚರಣೆಗಳ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ನ.29 ರಂದು ಹಮ್ಮಿಕೊಳ್ಳಾಗಿತ್ತು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ಅಧಿಕಾರಿಗಳಿಗೆ, ಮುಟ್ಟಾದ ಮಹಿಳೆ ಅಂಗನವಾಡಿ ಆವರಣದಲ್ಲಿ ಇರುವುದು ಕಂಡುಬಂದಿತ್ತು. ನಿರಾಶ್ರಿತರ ರೀತಿ, ತಟ್ಟೆ, ಲೋಟ, ಹೊದಿಕೆಯೊಂದಿಗೆ ಚಳಿಯಲ್ಲಿ ಮಹಿಳೆ ವಾಸ್ತವ್ಯ ಹೂಡಿದ್ದಳು. ಈ ಬಗ್ಗೆ ಗ್ರಾಮಸ್ಥರನ್ನು ವಿಚಾರಿಸಿದಾಗ ಹಲವಾರು ವರ್ಷಗಳಿಂದ ಈ ಪದ್ದತಿ ಆಚರಿಸಿಕೊಂಡು ಬಂದಿರುತ್ತಿದ್ದೇವೆ. ಊರಿನಲ್ಲಿ ಯಾವುದೇ ಹೆಣ್ಣು ಮಗಳು ಋತುಮತಿಯಾದರೆ, ಮುಟ್ಟಾದರೆ ಹಾಗೂ ಹೆರಿಗೆ ಆದರೆ ಪದ್ದತಿ ಪ್ರಕಾರ ಆ ಮಹಿಳೆ ಮನೆಯನ್ನು ತೊರೆದು ಬಯಲಲ್ಲಿ ವಾಸಿಸುವುದು ವಾಡಿಕೆಯಾಗಿದೆ ಎಂದು ಉತ್ತರಿಸಿದ್ದಾರೆ.
ಅಧಿಕಾರಿಗಳು ಆಪ್ತ ಸಮಾಲೋಚನೆ ನೆಡಿಸಿ ಹಾಗೂ ಪೊಲೀಸ್ ದೂರು ದಾಖಲಿಸುವ ಬಗ್ಗೆ ಎಚ್ಚರಿಕೆ ನೀಡಿದ ಬಳಿಕ ಮಹಿಳೆ ಮನೆ ಸೇರಿದ್ದಾಳೆ. ನಂತರ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಲಿಂಗತಜ್ಞೆ ಡಿ.ಗೀತಾ ಇಂತಹ ಅನಿಷ್ಠ ಪದ್ದತಿಗಳು ಕಂಡುಬಂದರೆ, ಮಹಿಳಾ ಸಹಾಯವಾಣಿ ಸಂಖ್ಯೆ 181 ಮತ್ತು ಪೊಲೀಸ್ ಸಹಾಯವಾಣಿ 112 ಕೆರೆ ಮಾಡುವಂತೆ ಗ್ರಾಮಸ್ಥರಿಗೆ ತಿಳಿಸಿದರು. ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕರ ನಿಷೇಧ ಕಾಯ್ದೆ, ಫೋಕ್ಸೋ ಕಾಯಿದೆ, ಮಕ್ಕಳ ಸಹಾಯವಾಣಿ ಸಂಖ್ಯೆ 1098 ಸೇರಿದಂತೆ, ಬಾಲ ತಾಯಂದಿರು, ಸುರಕ್ಷಿತ ಸ್ಪರ್ಶ ಅಸುರಕ್ಷಿತ ಸ್ಪರ್ಶ, ಹಾಗೂ ಶಿಕ್ಷಣದ ಮಹತ್ವ ಹಾಗೂ ಮೌಢ್ಯ ಆಚರಣೆಗಳನ್ನು ಮಾಡದಂತೆ ಜಾಗೃತಗೊಳಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಐಕ್ಯತ ಸಪ್ತಾಹ ಅಂಗವಗಿ ಪ್ರಮಾಣ ವಚನ ಬೋಧಿಸಲಾಯಿತು.
ಗ್ರಾ.ಪಂ.ಅಧ್ಯಕ್ಷೆ ರಾಧ, ಆರೋಗ್ಯ ಅಧಿಕಾರಿ ಸಾಧಿಕ್, ಪೊಲೀಸ್ ಇಲಾಖೆ ತಿಪ್ಪೇಸ್ವಾಮಿ, ಹಿರಿಯ ಆರೋಗ್ಯ ಸಹಾಯಕಿ ಕಮಲಮ್ಮ, ಅಂಗನವಾಡಿ ಮೇಲ್ವಿಚಾರಕಿ ಮಂಜುಳಾ, ಗ್ರಾಮದ ದೇವಸ್ಥಾನದ ಪೂಜಾರಿ ಮಾರಪ್ಪ, ಸೇರಿದಂತೆ ಅಂಗವಾಡಿ ಹಾಗೂ ಕಾರ್ಯಕರ್ತೆಯರು ಗ್ರಾಮಸ್ಥರು ಮಹಿಳೆಯರು ಈ ವೇಳೆ ಉಪಸ್ಥಿತರಿದ್ದರು.