ಚಿತ್ರದುರ್ಗ : ಜಾನಪದ ಕಲೆಯನ್ನು ವಿಶ್ವಕ್ಕೆ ಪಸರಿಸಿರುವ ಜಾನಪದ ಕಲಾವಿದರ ಬದುಕು ಸಂಕಷ್ಟದಲ್ಲಿದೆ ಎಂದು ಧಮ್ಮ ಕೇಂದ್ರದ ಆರ್.ವಿಶ್ವಸಾಗರ್ ಹೇಳಿದರು.
ಧ್ವನಿ ಗ್ರಾಮೀಣಾಭಿವೃದ್ದಿ ಮತ್ತು ಸಾಂಸ್ಕೃತಿಕ ಕಲಾ ಸಂಘ ಹುಲ್ಲೂರು, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಇವುಗಳ ಸಹಯೋಗದೊಂದಿಗೆ ಮಠದ ಕುರುಬರಹಟ್ಟಿಯಲ್ಲಿರುವ ಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜನಪದ ಸಾಂಸ್ಕೃತಿಕ ಉತ್ಸವ ಹಾಗೂ ಕಲಾವಿದರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಾನಪದ ಕಲೆಗಳಾದ ತಮಟೆ, ಹಾರ್ಮೋನಿಯಂ, ಕಹಳೆ, ತಬಲ, ಮದ್ದಲೆ ಇವುಗಳು ಕ್ಷೀಣಿಸುತ್ತಿವೆ. ಗ್ರಾಮೀಣ ಭಾಗದ ಅವಿದ್ಯಾವಂತರುಗಳಿಂದ ಹುಟ್ಟಿದ ಜಾನಪದ ಕಲೆಯನ್ನು ಉಳಿಸಿ ಬೆಳೆಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕಿದೆ. ಕಲಾವಿದರುಗಳಿಗೆ ಆಸೆ, ದುರಾಸೆಯಿಲ್ಲ. ಕಲೆಯಿಂದಲೆ ಜೀವನದಲ್ಲಿ ಸಂತೃಪ್ತಿ ಕಂಡುಕೊಳ್ಳುತ್ತಿದ್ದಾರೆಂದರು.
ಕಡ್ಲೆಗುದ್ದು ಆಂಜನೇಯಸ್ವಾಮಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಾ.ಮಹೇಶ್ ಮಾತನಾಡಿ ಜಾನಪದ ನಮ್ಮ ಮೂಲ ಸಂಸ್ಕøತಿ. ಜನಪದವೆಂದರೆ ಆಲದ ಮರವಿದ್ದಂತೆ. ಕಲಾವಿದರು ಅದರ ಬೇರುಗಳು. ಮೊಬೈಲ್, ಟಿ.ವಿ. ಹಾವಳಿಯಿಂದ ಜನಪದ ಕಣ್ಮರೆಯಾಗುತ್ತಿರುವುದು ನೋವಿನ ಸಂಗತಿ. ಜನಪದ ಹಾಡುಗಳನ್ನು ಕೇಳುತ್ತಿದ್ದರೆ ಮನಸ್ಸಿಗೆ ಉಲ್ಲಾಸವಾಗುತ್ತದೆ ಎಂದು ತಿಳಿಸಿದರು.
ಕಲಾವಿದರ ಬದುಕು ಬಡತನದಲ್ಲಿದೆ. ಕಲಾವಿದರಿಗೆ ತಕ್ಕಂತೆ ಸಂಭಾವನೆ ಸಿಗುತ್ತಿಲ್ಲ. ಎಲ್ಲರ ಮನೆ ಮನದಲ್ಲಿ ಜನಪದವಿರಬೇಕು. ಆಧುನಿಕ ಸಂಸ್ಕøತಿಗೆ ಮಾರು ಹೋಗಿರುವುದರಿಂದ ಜನಪದ ಹಾಡುಗಳನ್ನು ಕೇಳುವವರಿಲ್ಲದಂತಾಗಿದ್ದಾರೆ. ಮುಂದಿನ ಪೀಳಿಗೆಗೆ ಜನಪದ ಉಳಿಸಬೇಕಿದೆ ಎಂದರು.
ಧ್ವನಿ ಗ್ರಾಮೀಣಾಭಿವೃದ್ದಿ ಮತ್ತು ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ಎ.ಕೃಷ್ಣಪ್ಪ ಮಾತನಾಡುತ್ತ ಟಿ.ವಿ. ಮೊಬೈಲ್ ಬಂದ ಮೇಲೆ ಜನಪದ ಹಿಂದೆ ಸರಿದಿದೆ. ಸುಗ್ಗಿ ಕಾಲದಲ್ಲಿನ ಜಾನಪದ ಹಾಡುಗಳು ಕಿವಿಗೆ ಇಂಪಾಗಿರುತ್ತಿದ್ದವು. ಕೊಂಬು, ಕಹಳೆ ಮಹರಾಜರ ಕಾಲದಲ್ಲಿ ಮೊಳಗುತ್ತಿತ್ತು. ಕೋಲಾಟ, ಗೀಗಿಪದ, ಸೋಬಾನೆ, ಉರುಮೆ, ತಮಟೆ, ಟ್ರಾಶ್ ವಾದ್ಯ ನುಡಿಸುವವರು ಕಮ್ಮಿಯಾಗಿದ್ದಾರೆ. ದೇಹಕ್ಕೆ ಶ್ರಮವಿಲ್ಲದಂತಾಗಿರುವುದರಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ ಎಲ್ಲರನ್ನು ಕಾಡುತ್ತಿದೆ. ಕಲೆಯಿದ್ದರೆ ಎಲ್ಲಿ ಬೇಕಾದರೂ ಬೆಳೆಯಬಹುದೆಂದು ಕಲೆಯ ಮಹತ್ವ ತಿಳಿಸಿದರು.
ಬಸವೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷೆ ಪ್ರಭಾವತಿ ಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ವಿ.ಕೆ.ಶಂಕರಪ್ಪ, ಧಮ್ಮ ಕೇಂದ್ರದ ಅಧ್ಯಕ್ಷೆ ಅನ್ನಪೂರ್ಣ ವಿಶ್ವಸಾಗರ್, ನೀಲಮ್ಮ ಎ.ಕೃಷ್ಣಪ್ಪ ವೇದಿಕೆಯಲ್ಲಿದ್ದರು.
ಜಾನಪದ ಹಾಡುಗಾರ ಹರೀಶ್ ಜಾನಪದ ಹಾಡುಗಳನ್ನು ಹಾಡಿ ವಿಕಲಚೇತನ ಮಕ್ಕಳನ್ನು ರಂಜಿಸಿದರು.