ನಾಗಪುರ: ಭಾರತೀಯ ಸಮಾಜ ಉಳಿಯಲು ಪ್ರತಿ ದಂಪತಿ ಕನಿಷ್ಠ ಮೂವರು ಮಕ್ಕಳನ್ನು ಹೊಂದಬೇಕು ಎಂದು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ.
ನಾಗಪುರದಲ್ಲಿ ನಡೆದ ಕಥಲೆ ಕುಲ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜನಸಂಖ್ಯೆ ಬೆಳವಣಿಗೆ ದರ ಕುಸಿಯುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ತಮ್ಮ ಹೇಳಿಕೆಗೆ ಪೂರಕವಾಗಿ ಜನಸಂಖ್ಯಾ ಶಾಸ್ತ್ರೀಯ ಅಧ್ಯಯನ ಉಲ್ಲೇಖಿಸಿದ ಭಾಗವತ್, ಭಾರತದ ಒಟ್ಟು ಫಲವತ್ತತೆ ದರ ಅಂದರೆ ಮಹಿಳೆ ತನ್ನ ಜೀವಿತಾವಧಿಯಲ್ಲಿ ಜನ್ಮ ನೀಡುವ ಮಕ್ಕಳ ಸರಾಸರಿ ಸಂಖ್ಯೆ ಕನಿಷ್ಠ ಮೂರು ಆಗಿರಬೇಕು. ಜನಸಂಖ್ಯಾ ಶಾಸ್ತ್ರವೂ ಇದನ್ನೇ ಪ್ರತಿಪಾದಿಸುತ್ತದೆ. ಈ ಸಂಖ್ಯೆ ಬಹಳ ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಸಮಾಜ ಉಳಿಯಬೇಕು. ಪ್ರತಿ ಕುಟುಂಬವು ಸಮಾಜದ ಘಟಕವಾಗಿದೆ ಎಂದು ಅವರು ಕುಟುಂಬದ ಮಹತ್ವದ ಬಗ್ಗೆ ತಿಳಿಸಿದ್ದಾರೆ. ಜನಸಂಖ್ಯಾ ಶಾಸ್ತ್ರೀಯ ಅಧ್ಯಯನಗಳ ಪ್ರಕಾರ ಒಂದು ಸಮುದಾಯದ ಜನಸಂಖ್ಯೆ 2:1ರಷ್ಟು ಫಲವತ್ತತೆ ದರಕ್ಕಿಂತ ಕಡಿಮೆಯಾದಾಗ ಆ ಸಮಾಜ ಅಳಿವಿನಂಚಿನಲ್ಲಿದೆ ಎಂದರ್ಥ. ಪ್ರತಿ ಕುಟುಂಬವೂ ಒಂದು ಘಟಕವಾಗಿದ್ದು, ಪ್ರತಿ ಕುಟುಂಬವೂ ಸಮಾಜದ ಒಂದು ಭಾಗ. ಜನಸಂಖ್ಯೆ ಕುಸಿದರೆ ಸಮಾಜ ನಾಶವಾಗುತ್ತದೆ. ಸಮಾಜ ಉಳಿಯಲು ದಂಪತಿಗೆ ಮೂರು ಮಕ್ಕಳು ಇರಬೇಕು ಎಂದು ಹೇಳಿದ್ದಾರೆ.