ಢಾಕಾ : ಬಾಂಗ್ಲಾದೇಶ ಸರ್ಕಾರ ಇಸ್ಕಾನ್ನ ಮೂವರು ಸನ್ಯಾಸಿಗಳನ್ನು ಬಂಧಿಸಿ, 17 ಮಂದಿಯ ಬ್ಯಾಂಕ್ ಖಾತೆಗಳನ್ನ ಫ್ರೀಜ್ ಮಾಡಿತ್ತು.
ಇದೀಗ ಇಸ್ಕಾನ್ನ 50ಕ್ಕೂ ಹೆಚ್ಚು ಸದಸ್ಯರು ಭಾರತಕ್ಕೆ ತೆರಳದಂತೆ ತಡೆಹಿಡಿದಿದೆ ಎಂದು ವರದಿಯಾಗಿದೆ.ಪ್ರಯಾಣಕ್ಕೆ ಬೇಕಾದ ಪಾಸ್ಪೋರ್ಟ್, ವೀಸಾ ಸೇರಿ ಪೂರಕ ದಾಖಲೆಗಳಿದ್ದರೂ ಗಡಿ ಅಧಿಕಾರಿಗಳು ಭಾರತಕ್ಕೆ ತೆರಳಲು ಅನುಮತಿ ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.
ಸುಮಾರು 54 ಇಸ್ಕಾನ್ ಸದಸ್ಯರು ಶನಿವಾರ ತಡರಾತ್ರಿ ಮತ್ತು ಭಾನುವಾರ ಬೆಳಗ್ಗೆ ಬೆನಪೋಲ್ ಗಡಿಭಾಗಕ್ಕೆ ಆಗಮಿಸಿದ್ದರು. ಧಾರ್ಮಿಕ ಸಮಾರಂಭವೊಂದರಲ್ಲಿ ಪಾಲ್ಗೊಳ್ಳುವುದಕ್ಕಾಗಿ ಭಾರತಕ್ಕೆ ತೆರಳಲು ಗಂಟೆಗಟ್ಟಲೆ ಕಾದು ಕುಳಿತಿದ್ದರು. ಬಳಿಕ ಗಡಿ ಭದ್ರತಾ ಅಧಿಕಾರಿಗಳು ಅವರ ಪ್ರಯಾಣಕ್ಕೆ ಅನುಮತಿಯಿಲ್ಲ ಎಂದು ತಿಳಿಸಿದ್ದಾರೆ.
ಇದರಿಂದ ಬಾಂಗ್ಲಾದೇಶವು ಇಸ್ಕಾನ್ ಸಂಘಟನೆಯನ್ನ ಗುರಿಯಾಗಿಸಿಕೊಂಡು ಪ್ರಮುಖರನ್ನ ಬಂಧಿಸುವುದು, ಗಡಿ ದಾಟದಂತೆ ತಡೆಹಿಡಿಯುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಚಿತ್ತೋಗ್ರಾಮ್ನ ನ್ಯೂ ಮಾರ್ಕೆಟ್ ಪ್ರದೇಶದಲ್ಲಿ ಹಿಂದೂ ಸಮುದಾಯದ ರ್ಯಾಲಿ ಸಂದರ್ಭದಲ್ಲಿ ಬಾಂಗ್ಲಾದೇಶದ ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿದ್ದಾರೆ ಎಂದು ಆರೋಪಿಸಿ ಕೃಷ್ಣ ದಾಸ್ ಸೇರಿದಂತೆ 19 ಮಂದಿ ವಿರುದ್ಧ ಅ. 30ರಂದು ದೇಶದ್ರೋಹದ ಪ್ರಕರಣ ದಾಖಲಾಗಿತ್ತು. ಕೃಷ್ಣದಾಸ್ ಭೇಟಿಗೆ ತೆರಳಿದ್ದ ಇತರ ಸ್ವಾಮೀಜಿಗಳನ್ನು ಬಂಧಿಸಲಾಗಿತ್ತು.