ರಾಜಸ್ಥಾನ : ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಯುಪಿಎಸ್ಸಿಯೂ ಒಂದಾಗಿದೆ. ಪ್ರತಿ ವರ್ಷವೂ ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಹೀಗೆ ಪರೀಕ್ಷೆ ಬರೆದು ಅತ್ಯಂತ ಕಿರಿಯ ವಯಸ್ಸಿನಲ್ಲೇ ಐಎಎಸ್ ಅಧಿಕಾರಿಯಾದ ಸುಲೋಚನಾ ಮೀನಾ ಅವರ ಯಶೋಗಾಥೆ ಇದು.
ಸುಲೋಚನಾ ಮೀನಾ ಅವರು ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಅಡಲ್ವಾರಾ ಗ್ರಾಮದವರು. ಅಲ್ಲಿಯೇ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸುತ್ತಾರೆ. ಬಳಿಕ ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ತೆರಳಿತ್ತಾರೆ. ಅವರು ದೆಹಲಿ ವಿಶ್ವವಿದ್ಯಾಲಯದಿಂದ ಸಸ್ಯಶಾಸ್ತ್ರದಲ್ಲಿ ಪದವಿ ಪಡೆದರು. ಹಾಗೂ ಯುಪಿಎಸ್ಸಿ ಪರೀಕ್ಷೆ ಬರೆಯಲು ತಯಾರಿ ಪ್ರಾರಂಭಿಸಿದರು.
ಪ್ರತಿದಿನ 8-9 ಗಂಟೆಗಳ ಕಾಲ ಸುಲೋಚನಾ ಅವರು ಅಧ್ಯಯನ ಮಾಡುತ್ತಿದ್ದರು. ಜೊತೆಗೆ ಪರೀಕ್ಷೆಗೆ ತಯಾರಾಗಲು ಅವರು ಎನ್ಸಿಇಆರ್ಟಿ ಪುಸ್ತಕಗಳನ್ನು, ಅಣಕು ಪರೀಕ್ಷೆಗಳು ಮತ್ತು ಯೂಟ್ಯೂಬ್ ಮತ್ತು ಟೆಲಿಗ್ರಾಮ್ನಂತಹ ಪ್ಲಾಟ್ಫಾರ್ಮ್ಗಳನ್ನ ಅವಲಂಬಿಸುತ್ತಾರೆ. ತಾನು ಐಎಎಸ್ ಅಧಿಕಾರಿಯಾಗಬೇಕೆಂಬ ತಂದೆಯ ಕನಸು ಸುಲೋಚನಾ ಅವರಿಗೆ ಉತ್ತೇಜನ ನೀಡುತ್ತದೆ.
2021 ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಸುಲೋಚನ ಅವರು 415ನೇ ರ್ಯಾಂಕ್ ಗಳಿಸುತ್ತಾರೆ. ಈ ಮೂಲಕ ತನ್ನ ತಂದೆಯ ಕನಸನ್ನು ನನಸು ಮಾಡಿದರು. ತನ್ನ 22ನೇ ವಯಸ್ಸಿಗೆ ಐಎಎಸ್ ಅಧಿಕಾರಿಯಾಗುವ ಮೂಲಕ ಸುಲೋಚನಾ ಅವರು ಅನೇಕ ಯುವ ಆಕಾಂಕ್ಷಿಗಳಿಗೆ, ವಿಶೇಷವಾಗಿ ಗ್ರಾಮೀಣ ಹಿನ್ನೆಲೆಯ ಹುಡುಗಿಯರಿಗೆ ಮಾದರಿಯಾಗಿದ್ದಾರೆ.