ಅಮರಾವತಿ: ಕೌಶಲಾಭಿವೃದ್ಧಿ ಹಗರಣ ಪ್ರಕರಣದ ತನಿಖೆ ನಡೆಸಿ ಎನ್. ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದ್ದ ಸಿಐಡಿಯ ಹಿರಿಯ ಐಪಿಎಸ್ ಅಧಿಕಾರಿ ಎನ್. ಸಂಜಯ್ ಅವರನ್ನು ಸರ್ಕಾರಿ ಹಣ ದುರುಪಯೋಗ ಆರೋಪದಡಿ ಆಂಧ್ರಪ್ರದೇಶ ಸರ್ಕಾರ ಬುಧವಾರ ಅಮಾನತುಗೊಳಿಸಿದೆ. ಸಂಜಯ್ ಅವರು ಸದ್ಯ ಆಂಧ್ರಪ್ರದೇಶದ ವಿಪತ್ತು ನಿರ್ವಹಣೆ ಹಾಗೂ ಅಗ್ನಿಶಾಮಕ ಸೇವೆಗಳ ಮಹಾನಿರ್ದೇಶಕರಾಗಿದ್ದಾರೆ.
ಟಿಡಿಪಿ ನೇತೃತ್ವದ ಎನ್ಡಿಎ ಸರ್ಕಾರ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ ನಂತರ ಅಮಾನತುಗೊಳ್ಳುತ್ತಿರುವ ನಾಲ್ಕನೇ ಐಪಿಎಸ್ ಅಧಿಕಾರಿಯಾಗಿದ್ದಾರೆ. ಇವರ ಆರೋಪಗಳ ಕುರಿತು ವಿಚಕ್ಷಣ ಹಾಗೂ ಜಾರಿ ಇಲಾಖೆಯು ತನಿಖೆ ನಡೆಸಿದೆ ಎಂದು ಸರ್ಕಾರ ಹೊರಡಿಸಿರುವ ಅಮಾನತು ಆದೇಶದಲ್ಲಿ ಹೇಳಲಾಗಿದೆ. 1996ರ ತಂಡದ ಐಪಿಎಸ್ ಅಧಿಕಾರಿಯಾಗಿರುವ ಸಂಜಯ್, ಲ್ಯಾಪ್ಟಾಪ್ ಹಾಗೂ ಐಪ್ಯಾಡ್ಗಳನ್ನು ತ್ವರಿತವಾಗಿ ಖರೀದಿ ಮಾಡುವ ಸಂದರ್ಭದಲ್ಲಿ ಅವ್ಯವಹಾರ ನಡೆಸಿದ್ದಾರೆ.
ಅಧಿಕಾರ ಹಾಗೂ ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಆ ಮೂಲಕ ಸಾರ್ವಜನಿಕರ ನಂಬಿಕೆಯನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಜಾಗೃತಿ ಮೂಡಿಸುವ ಕಾರ್ಯಾಗಾರವನ್ನು ಆಯೋಜಿಸಿದ್ದು, ಅದರಲ್ಲಿ ನಿಯಮಗಳನ್ನು ಪಾಲಿಸಿಲ್ಲ. ಜತೆಗೆ ಸಂಸ್ಥೆಯೊಂದರ ಜತೆ ಸೇರಿಕೊಂಡು ಅಕ್ರಮವಾಗಿ ₹1.15 ಕೋಟಿಯಷ್ಟು ಹೆಚ್ಚುವರಿ ಪಾವತಿ ಮಾಡಲಾಗಿದೆ ಎಂದೂ ಆರೋಪಿಸಲಾಗಿದೆ. ಕಳೆದ ಸೆಪ್ಟೆಂಬರ್ನಲ್ಲಿ ಡಿಜಿ ಶ್ರೇಣಿಯ ಮೂವರು ಅಧಿಕಾರಿಗಳನ್ನು ಚಂದ್ರಬಾಬು ನಾಯ್ಡು ಸರ್ಕಾರ ಅಮಾನತುಗೊಳಿಸಿತ್ತು.