ಶಿವಮೊಗ್ಗ:- ಜಿಲ್ಲೆಗೊಂದು ಗಾಂಧಿಭವನವನ್ನು ನಿರ್ಮಿಸಿ, ಗಾಂಧೀಜಿಯವರ ಸಿದ್ಧಾಂತಗಳನ್ನ ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ, ರೈತರಿಗೆ, ಕಾರ್ಮಿಕರಿಗೆ, ತಿಳಿಸಿಕೊಡಲು ಅನುಕೂಲಕರವಾಗುವಂತಹ ವ್ಯವಸ್ಥೆ ಕಲ್ಪಿಸಲು ಯಾವ ಯಾವ ಜಿಲ್ಲೆಗಳಲ್ಲಿ ಗಾಂಧಿ ಭವನವಿಲ್ಲವೋ, ಅಂತಹ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಭೇಟಿ ಮಾಡಿ, ಮನವಿ ಸಲ್ಲಿಸಲಾಯಿತು.
ಗಾಂಧಿ ಭವನಕ್ಕೆ ಬೇಕಾದಂತ ಜಾಗ ಮತ್ತು ಕಟ್ಟಡಕ್ಕೆ ಬೇಕಾದಂತ ಹಣದ ವ್ಯವಸ್ಥೆಯನ್ನು ಸರ್ಕಾರದಿಂದ ಮಾಡಿಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ ಎಚ್ ಕೆ ಎಸ್ ಸ್ವಾಮಿಯವರು ವಿನಂತಿಸಿಕೊಂಡಿದ್ದಾರೆ.
ಅವರು ಶಿವಮೊಗ್ಗ ನಗರದ ಸಹಾಯಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ, ಶಿವಮೊಗ್ಗಕ್ಕೆ ಗಾಂಧಿ ಭವನದ ನಿರ್ಮಾಣ ಮತ್ತು ಈಗ ಇರುವ ಗಾಂಧಿ ಭವನದಲ್ಲಿ ಚಟುವಟಿಕೆಗಳನ್ನ ಆಯೋಜಿಸಲು ಸ್ಥಳಾವಕಾಶವನ್ನು ಕಲ್ಪಿಸಿ ಕೊಡಿ ಎಂದು ವಿವಿಧ ಸಂಘಟನೆಗಳೊಂದಿಗೆ ಮನವಿ ಸಲ್ಲಿಸಲು ತೆರಳಿದಾಗ ಮಾತನಾಡುತ್ತಿದ್ದರು.
ಶಿವಮೊಗ್ಗ ನಗರದಲ್ಲಿರುವ ಈಗಿನ ಫ್ರೀಡಂ ಪಾರ್ಕ್ ನಲ್ಲಿರುವ ಗಾಂಧಿ ಭವನ, ಪೂರ್ಣ ಪ್ರಮಾಣದಲ್ಲಿ ಗಾಂಧೀಜಿಯವರ ಚಿತ್ರಣವನ್ನು, ಚಟುವಟಿಕೆಗಳನ್ನ ಬಿಂಬಿಸಲು ವಿಫಲವಾಗಿದೆ, ಕಾರಣ ಆ ಕಟ್ಟಡದಲ್ಲಿ ಸರ್ಕಾರದ ಇತರ ಇಲಾಖೆಗಳು ಕೆಲಸ ನಿರ್ವಹಿಸುತ್ತಿದ್ದು, ಗಾಂಧೀಜಿಯವರ ಚಟುವಟಿಕೆಗೆ ಸ್ಥಳಾವಕಾಶ ಕಡಿಮೆಯಾಗಿದ್ದು ಮತ್ತು ಅದರ ಅನುಮತಿ ಪಡೆಯಲು ಸಹ ಕಷ್ಟಕರವಾಗಿದ್ದು, ನಗರಕ್ಕೆ ಪರಿಪೂರ್ಣವಾದ ಹೊಸದಾದ ಗಾಂಧೀ ಭವನವನ್ನು ಕಟ್ಟಿಕೊಡಲು ಮನವಿ ಮಾಡಿಕೊಂಡರು.
ಈಗ ಸಹಾಯಕ ಜಿಲ್ಲಾಧಿಕಾರಿಗಳು ಶನಿವಾರ, ಭಾನುವಾರ ಮತ್ತು ರಜದ ದಿನಗಳಲ್ಲಿ ಈ ಕಟ್ಟಡದ ಅರ್ಧಭಾಗ ಮತ್ತು ಬಳಕೆಯಾಗದ ವರಾಂಡವನ್ನ ಬಳಕೆ ಮಾಡಿಕೊಂಡು, ಚರಕ ಪ್ರದರ್ಶನ ಮತ್ತು ಚರಕ ತರಬೇತಿಗಳನ್ನ ನೀಡಿ ಎಂದು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಆದರೆ ಪೂರ್ಣ ಪ್ರಮಾಣದ ಕಾರ್ಯಕ್ರಮಗಳನ್ನು ಮಾಡಲು ಹೋದಾಗ ಪಕ್ಕದಲ್ಲಿರುವ ಕಚೇರಿಗಳಿಗೆ ತೊಂದರೆಯಾಗುತ್ತದೆ, ಆದ್ದರಿಂದ ಪೂರ್ಣ ಪ್ರಮಾಣದ ಗಾಂಧಿ ಭವನ ನಿರ್ಮಿಸಿ, ಎಲ್ಲಾ ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮಗಳಿಗೆ, ಅವುಗಳ ಅನುಷ್ಠಾನಕ್ಕೆ ಗಾಂಧಿ ಭವನದಲ್ಲಿ ಅವಕಾಶ ಕಲ್ಪಿಸಿಕೊಡಿ ಎಂದು ಮನವಿ ಸಲ್ಲಿಸಿದ್ದಾರೆ.
ಮಕ್ಕಳಿಗೆ ಗಾಂಧಿ ಭವನದಲ್ಲಿ ವೀಕ್ಷಣೆಗಾಗಿ ಅವರ ಪುಸ್ತಕಗಳು, ಫೋಟೋಗಳು, ಅವರ ಮಾಡಿದಂತಹ ಸತ್ಯಾಗ್ರಹದ ಸಾಧನೆಗಳನ್ನ ಮತ್ತು ಜೀವನ ಚರಿತ್ರೆಯನ್ನು ಬಿಂಬಿಸುವಷ್ಟು ಮತ್ತು ಚರಕಗಳ ಪ್ರದರ್ಶನ ಮಾಡಲು, ಗಾಂಧೀಜಿಯವರ ಜೊತೆ ಹೋರಾಟ ಮಾಡಿದಂತಹ ವ್ಯಕ್ತಿಗಳ ಪುಸ್ತಕಗಳನ್ನ, ಓದುಗರಿಗೆ ಒದಗಿಸಲು ಪೂರ್ಣ ಪ್ರಮಾಣದ ಗಾಂಧಿ ಭವನ ಇದ್ದರೆ ಅನುಕೂಲಕರ. ಅರ್ಧ ಗಾಂಧಿ ಭವನದಲ್ಲಿ ಇನ್ನಿತರ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದಾಗ ಯಾವುದಾದರೂ ಒಂದು ಕಾರ್ಯಕ್ರಮ ಮಾಡಲು ತೊಂದರೆಯಾಗುತ್ತದೆ, ಆದ್ದರಿಂದ ಪೂರ್ಣ ಪ್ರಮಾಣದ ಗಾಂಧಿ ಭವನ ಪ್ರತಿ ಜಿಲ್ಲೆಗಳಲ್ಲಿ ನಿರ್ಮಿಸಿಕೊಟ್ಟರೆ, ಖಂಡಿತ ನಾವು ಗಾಂಧೀಜಿಯವರ ವಿಚಾರಗಳನ್ನ ಇಂದಿನ ಜನಾಂಗಕ್ಕೆ ತಲುಪಿಸಲು ಅನುಕೂಲಕರವಾಗುತ್ತದೆ ಎಂದರು.
ಉಳಿವು ಸಂಸ್ಥೆಯ ನಿರ್ದೇಶಕಿ ಡಾ ಸೀಮಾ.ಎಸ್ ಆರ್, ನ್ಯಾಯವಾದಿಗಳಾದ ಶ್ರೀ ಶ್ರವಣ್ ಮಾತನಾಡಿದರು. ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂಶೋಧನಾ ವಿದ್ಯಾರ್ಥಿಯಾದ ತರೀಕೆರೆಯ ಶಂಕರ್ ಮತ್ತು ಎಂ ಸಿ ಎ. ವಿದ್ಯಾರ್ಥಿನಿ ಎಚ್.ಎಸ್ ರಚನಾ ಭಾಗವಹಿಸಿದ್ದರು. ಹಾಗೂ ಇದೇ ಸಂದರ್ಭದಲ್ಲಿ ಚರಕ ಹೇಗೆ ಕೆಲಸ ನಿರ್ವಹಿಸುತ್ತದೆ ಎಂಬುದನ್ನು ಸಹ ಸಹಾಯಕ ಜಿಲ್ಲಾಧಿಕಾರಿಗಳಿಗೆ ಪ್ರದರ್ಶಿಸಿ, ದಾರ ತೆಗೆಯುವುದನ್ನು ಸಹ ವಿವರಿಸಲಾಯಿತು.