ಆಗ್ರಾ(ಉತ್ತರ ಪ್ರದೇಶ): ಸೈಬರ್ ವಂಚಕರು ಮಾಜಿ ಮಿಸ್ ಇಂಡಿಯಾ ವಿಜೇತೆಯೊಬ್ಬರಿಂದ 99 ಸಾವಿರ ರೂ.ಗಳನ್ನು ಲಪಟಾಯಿಸಿದ್ದಾರೆ. 2017ರಲ್ಲಿ ಮಿಸ್ ಇಂಡಿಯಾ ಆಗಿ ಹೊರಹೊಮ್ಮಿದ್ದ ಆಗ್ರಾ ಮೂಲದ ಶಿವಂಕಿತಾ ದೀಕ್ಷಿತ್ ವಂಚನೆಗೊಳಗಾದವರು.
ಸಿಬಿಐ ಅಧಿಕಾರಿಗಳಂತೆ ವರ್ತಿಸಿ ಎರಡು ಗಂಟೆಗಳ ಕಾಲ ಶಿವಂಕಿತಾ ದೀಕ್ಷಿತ್ ಅವರನ್ನು ಡಿಜಿಟಲ್ ಅರೆಸ್ಟ್ ಮಾಡುವ ಮೂಲಕ 99,000 ರೂ.ಗಳನ್ನು ಸೈಬರ್ ಖದೀಮರು ವಂಚನೆ ಮಾಡಿದ್ದಾರೆ. ಶಿವಂಕಿತಾ ದೀಕ್ಷಿತ್ ಅವರಿಗೆ ಕರೆ ಮಾಡಿದ ಸೈಬರ್ ವಂಚಕರು, ‘ಮಾನವ ಮತ್ತು ಮಾದಕವಸ್ತು ಕಳ್ಳಸಾಗಣೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನೀವು (ಶಿವಂಕಿತಾ ದೀಕ್ಷಿತ್) ಭಾಗಿಯಾಗಿ ಆಕ್ರಮ ಹಣ ಪಡೆದಿದ್ದಿರಿ ಎಂದು ಆರೋಪಿಸಿದ್ದಾರೆ.
ಬಳಿಕ ಸಿಬಿಐ ಅಧಿಕಾರಿಗಳಂತೆ ಬಟ್ಟೆ ಧರಿಸಿ ವಾಟ್ಸ್ಯಾಪ್ ಕಾಲ್ ಮಾಡಿದ್ದಾರೆ. ನಿಮ್ಮನ್ನು ಯಾವಾಗ ಬೇಕಾದರೂ ಬಂಧಿಸಬಹದು. ಈ ಬಂಧನದಿಂದ ತಪ್ಪಿಸಲು 2.5 ಲಕ್ಷ ರೂ. ಪಾವತಿಸುವಂತೆ ಒತ್ತಾಯಿಸಿದ್ದಾರೆ. ವಂಚಕರ ಬೆದರಿಕೆಯನ್ನು ನಂಬಿದ ದೀಕ್ಷಿತ್ 2.5 ಲಕ್ಷ ರೂ. ಪಾವತಿಸಲು ಮುಂದಾಗಿದ್ದರೂ ವಹಿವಾಟು ಮಿತಿ ಹಿನ್ನೆಲೆಯಲ್ಲಿ 99 ಸಾವಿರ ರೂ.ಗಳನ್ನು ಮಾತ್ರ ಪಾವತಿಸಲು ಸಾಧ್ಯವಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಮಯಾಂಕ್ ತಿವಾರಿ ಹೇಳಿದರು.
ಬಳಿಕ ಶಿವಂಕಿತಾ ದೀಕ್ಷಿತ್ ಈ ವಿಷಯ ತಮ್ಮ ತಂದೆ ತಾಯಿಗೆ ತಿಳಿಸಿದಾಗ ವಂಚನೆ ಒಳಗಾಗಿರುವುದು ಗೊತ್ತಾಗಿದೆ. ದೀಕ್ಷಿತ್ ತಂದೆ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.