ಚಾಮರಾಜನಗರ : ನಾನೀಗ ರಾಜಕೀಯದ ಕೊನೆಗಾಲದಲ್ಲಿದ್ದೇನೆ. ಜನರ ಪ್ರೀತಿ, ಅಭಿಮಾನ ಗಳಿಸದಿದ್ದರೆ ರಾಜಕೀಯದಲ್ಲಿ ಉಳಿಗಾಲವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದಲ್ಲಿ ಸರ್ಕಾರಿ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತೀರಿ ಎಂದಿದ್ದರು. ಜೆ.ಹೆಚ್.ಪಟೇಲರಿಗೆ ಆಗಿನ ಕೆಲ ಶಾಸಕರು ಹೇಳಿದ್ದರು. ಪಾಪ ಆಗಿನಿಂದ ಆ ಕಳಂಕ ಚಾಮರಾಜನಗರ ಮೇಲಿದೆ. ನಾನು ೨ನೇ ಬಾರಿ ಮುಖ್ಯಮಂತ್ರಿಯಾಗಿ ಚಾಮರಾಜನಗರಕ್ಕೆ ಬಂದಿದ್ದೇನೆ. ಈ ಮೂಢನಂಬಿಕೆಯನ್ನು ಅವರು ನಂಬಿರಲಿಲ್ಲ, ನಾನೂ ನಂಬಲಿಲ್ಲ ಎಂದು ತಿಳಿಸಿದರು.
ಚಾಮರಾಜನಗರಕ್ಕೆ ಬಂದು ಹೊಸ ಜಿಲ್ಲೆ ಘೋಷಣೆ ಮಾಡಿದ್ದೆವು. ಆಗ ನಾನು ಉಪ ಮುಖ್ಯಮಂತ್ರಿಯಾಗಿದ್ದೆ. ನಾವು ಚಾಮರಾಜನಗರಕ್ಕೆ ಬಂದು ಜಿಲ್ಲೆಯನ್ನು ಘೋಷಣೆ ಮಾಡಿದ್ದು. ನಾನು ಏನಿಲ್ಲ ಅಂದರೂ 20 ಬಾರಿ ಚಾಮರಾಜನಗರಕ್ಕೆ ಬಂದಿದ್ದೇನೆ. ನಾನು ಚಾಮರಾಜನಗರಕ್ಕೆ ಬಂದಾಗಲೆಲ್ಲ ಅಧಿಕಾರ ಕಳೆದುಕೊಳ್ಳುವ ಬದಲು ಸಿಎಂ ಕುರ್ಚಿ ಗಟ್ಟಿಯಾಗಿದೆ ಎಂದು ಹೇಳಿದರು.