ಮಹಾರಾಷ್ಟ್ರ : ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ ಸಿಯಲ್ಲಿ ತೇರ್ಗಡೆಯಾಗುವುದು ಕಷ್ಟಸಾಧ್ಯ. ಈ ಪರೀಕ್ಷೆಯನ್ನು ಕೆಲವರು ಒಂದೇ ಒಂದು ಪ್ರಯತ್ನದಲ್ಲಿ ಉತ್ತೀರ್ಣರಾಗುತ್ತಾರೆ. ಆದರೆ ಕೆಲವರು ಮಾತ್ರ ಹಲವಾರು ಬಾರಿ ಪರೀಕ್ಷೆ ಬರೆದ ನಂತರ ಯುಪಿಎಸ್ ಸಿಯಲ್ಲಿ ಉತ್ತೀರ್ಣರಾಗುತ್ತಾರೆ. ಹೀಗೆ ಎರಡು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದು ಉತ್ತೀರ್ಣರಾದ ಅರ್ಪಿತಾ ತುಬೆ ಅವರ ಸ್ಪೂರ್ತಿದಾಯಕ ಕತೆ ಇದು.
ಅರ್ಪಿತಾ ತುಬೆ ಮಹಾರಾಷ್ಟ್ರ ಮೂಲದವರಾಗಿದ್ದು, ಅವರು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ್ದಾರೆ. ಅರ್ಪಿತಾ ಅವರು ತನ್ನ 12 ನೇ ತರಗತಿಯನ್ನು ಪೂರ್ಣಗೊಳಿಸಿದ ಬಳಿಕ ಸರ್ದಾರ್ ಪಟೇಲ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಾರೆ. ಈ ವೇಳೆ ದೇಶ ಸೇವೆ ಮಾಡಲು ನಿರ್ಧರಿಸಿದ ಅವರು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸುತ್ತಾರೆ.
2019 ರಲ್ಲಿ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದ ಅರ್ಪಿತಾ ಅವರು ಉತ್ತೀರ್ಣರಾಗುವುದರಲ್ಲಿ ವಿಫಲರಾಗುತ್ತಾರೆ. ಆದರೆ ಛಲ ಬಿಡದೆ 2020ರಲ್ಲಿ ಪುನಃ ಯುಪಿಎಸ್‌ಸಿ ಪರೀಕ್ಷೆ ಬರೆದ ಅವರು 383 ನೇ ರ‍್ಯಾಂಕ್ ಗಳಿಸಿ, ಐಪಿಎಸ್ ಅಧಿಕಾರಿಯಾಗುವಲ್ಲಿ ಸಫಲರಾಗುತ್ತಾರೆ.
ಐಪಿಎಸ್ ಅಧಿಕಾರಿಯಾಗುವುದು ಕೂಡ ಗಮನಾರ್ಹ ಸಾಧನೆಯಾದರೂ ಅರ್ಪಿತಾ ಅವರು ಐಎಎಸ್ ಅಧಿಕಾರಿಯಾಗಬೇಕೆಂಬ ಹಂಬಲ ಹೊಂದಿದ್ದರು. 2021 ರಲ್ಲಿ ಮತ್ತೊಮ್ಮೆ ಪರೀಕ್ಷೆ ಪರೆದ ಅವರು ಉತ್ತೀರ್ಣರಾಗುವಲ್ಲಿ ವಿಫಲರಾಗುತ್ತಾರೆ. ಈ ವೇಳೆ ಅವರು ತನ್ನ ಐಪಿಎಸ್ ಕರ್ತವ್ಯಗಳಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸುತ್ತಾರೆ.
ಬಳಿಕ ಒಂದು ಅಂತಿಮ ಪ್ರಯತ್ನಕ್ಕೆ ಸಂಪೂರ್ಣವಾಗಿ ತನ್ನನ್ನು ತೊಡಗಿಸಿಕೊಂಡ ಅರ್ಪಿತಾ ಅವರು, 2022 ರಲ್ಲಿ ನಾಲ್ಕನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆಯುತ್ತಾರೆ. ಅರ್ಪಿತಾ ಅವರ ಈ ಪ್ರಯಾಣ ಹಾಗೂ ಅವರ ಕಠಿಣ ಪರಿಶ್ರಮವು ಹಲವಾರು ಯುಪಿಎಸ್‌ಸಿ ಅಭ್ಯರ್ಥಿಗಳಿಗೆ ಪ್ರೇರಣೆಯಾಗಿದೆ.