ಚಿತ್ರದುರ್ಗ: ಒಳ ಮೀಸಲಾತಿಯನ್ನು ಜಾರಿ ಮಾಡುವಂತೆ ಸರ್ಕಾರದ ಮೇಲೆ ಒತ್ತಡವನ್ನು ತರುವ ಸಲುವಾಗಿ ಚಿತ್ರದುರ್ಗ ನಗರದಲ್ಲಿ ರಾಜ್ಯ ಮಟ್ಟದ ಮಾದಿಗ ವಕೀಲರ ಸಮಾವೇಶವನ್ನು ಡಿ. 14 ರ ಶನಿವಾರ ಬೆಳಿಗ್ಗೆ 10.30ಕ್ಕೆ ನಗರದ ತರಾಸು ರಂಗಮಂದಿರದಲ್ಲಿ ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆವತಿಯಿಂದ ಹಮ್ಮಿಕೊಂಡಿರುವುದಾಗಿ ನ್ಯಾಯಾವಾದಿಗಳಾದ ಅರುಣ್ ಕುಮಾರ್ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 1, 2024ರಂದು ಪರಿಶಿಷ್ಟ ಜಾತಿ ಪಂಗಡಗಳಲ್ಲಿ ಒಳಮೀಸಲಾತಿ ಕಲ್ಪಿಸಲು ಆಯಾಯ ರಾಜ್ಯಗಳಿಗೆ ಅಧಿಕಾರ ಇದೆಯೆಂದು ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದಿಂದ ಐತಿಹಾಸಿಕ ತೀರ್ಪು ಹೊರಬಂದಿರುವುದು ತುಳಿತಕ್ಕೊಳಗಾದ ಶೋಷಿತ ವರ್ಗಗಳಿಗೆ ಶಿಕ್ಷಣ, ಉದ್ಯೋಗ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯಲು ಒಂದು ರಹದಾರಿ .
ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಒಳಮೀಸಲಾತಿಗಾಗಿ 30 ವರ್ಷಗಳಿಂದ ಹೋರಾಟ ನಡೆಯುತ್ತಿದ್ದು. ಈ ಹೋರಾಟದಲ್ಲಿ ಹಲವರು ತಮ್ಮ ಬದುಕನ್ನು ತ್ಯಾಗ ಮಾಡಿದ್ದರೆ, ಮತ್ತೆ ಕೆಲವರು ಪ್ರಾಣತ್ಯಾಗ ಮಾಡಿರುತ್ತಾರೆ ಎಂಬುದು ತಮಗೆ ತಿಳಿದಿರುವ ಸಂಗತಿಯಾಗಿದೆ ಎಂದರು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದಡಿ.ವೈ.ಚಂದ್ರಚೂಡ್ ಮತ್ತು ಉಳಿದ 6 ಜನ ನ್ಯಾಯಮೂರ್ತಿ ಗಳಾದ ಬಿ.ಆರ್.ಗವಾಯಿ, ವಿಕ್ರಮ್ ನಾಥ್, ಬೇಲಾ ಎಂ.ತ್ರಿವೇದಿ, ಪಂಕಜ್ ಮಿಥಾಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರಶರ್ಮ ಒಳಗೊಂಡಂತೆ 6:1ರ ಅನುಪಾತದಲ್ಲಿ ಪರಿಶಿಷ್ಟ ಜಾತಿಗಳಿಗೆ ಉಪವರ್ಗೀಕರಣ ಮಾಡಬಹುದೆಂದು ಆಯಾಯಾ ರಾಜ್ಯಗಳಿಗೆ ತೀರ್ಪನ್ನು ನೀಡಿರುತ್ತಾರೆ.
ಹಿಂದೆ ಇದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರ ಸದಾಶಿವ ಆಯೋಗವನ್ನು ರಚಿಸಿ ನ್ಯಾ. ಸದಾಶಿವರವರ ನೇತೃತ್ವದಲ್ಲಿ ಸತತ 7 ವರ್ಷಗಳ ಕಾಲ 20 ಲಕ್ಷದ 54 ಸಾವಿರ ಕುಟುಂಬಗಳನ್ನು ವೈಜ್ಞಾನಿಕ ಸಮೀಕ್ಷೆಗೊಳಪಡಿಸಿ ನಂತರ 2012ರಲ್ಲಿ ಆಯೋಗದ ವರದಿಯನ್ನು ಅಂದಿನ ಮುಖ್ಯಮಂತ್ರಿಗಳಾದ ಸದಾನಂದಗೌಡರಿಗೆ ಸಲ್ಲಿಸಿತು.
ಪರಿಶಿಷ್ಟರ ನೂರೊಂದು ಜಾತಿಗಳಲ್ಲಿ ಮಾದಿಗ-ಮಾದಿಗ ಸಹಸಂಬಂಧಿತ ಜಾತಿಗಳಿಗೆ ಶೇ.6ರಷ್ಟು, ಹೊಲೆಯ ಸಹಸಂಬಂಧಿತ ಜಾತಿಗಳಿಗೆ ಶೇ.5ರಷ್ಟು, ಸ್ಪೃಶ್ಯ ಜಾತಿಗಳಾದ ಕೊರಮ, ಕೊರಚ, ಬೋವಿ, ಲಂಬಾಣಿಗಳಿಗೆ ಶೇ.3ರಷ್ಟು, ಅಲೆಮಾರಿ ಅಸ್ಪೃಶ್ಯ ಜಾತಿಗಳಿಗೆ ಶೇ.1ರಷ್ಟನ್ನು ಜನಸಂಖ್ಯಾ ಆಧಾರಿತವಾಗಿ ಒಳಮೀಸಲಾತಿ ಕಲ್ಪಿಸಿದೆ.
ಸುಪ್ರೀಂಕೋರ್ಟ್ ಆಗಸ್ಟ್ 1, 2024ರಂದು ನೀಡಿದ ಆದೇಶದನ್ವಯ ಕರ್ನಾಟಕ ಸರ್ಕಾರವು ದಿನಾಂಕ: 28.10.2024ರಂದು ಸಚಿವ ಸಂಪುಟ ಸಭೆಯಲ್ಲಿ ಎಂಪೇರಿಕಲ್ ಡಾಟಾ ಸಂಗ್ರಹ ಮಾಡಲು ಏಕಸದಸ್ಯ ಆಯೋಗವನ್ನು ರಚಿಸಿ ನಿವೃತ್ತ ನ್ಯಾ. ಹೆಚ್.ಎನ್.ನಾಗಮೋಹನ್ದಾಸ್ ಅವರನ್ನು ಆಯೋಗಕ್ಕೆ ನೇಮಿಸಿತು. ಮುಂದುವರೆದು ಹೊರಡಿಸಿದ್ದು.
ಈ ಕಾರ್ಯಸೂಚಿಗೆ ತಕ್ಕಂತೆ ನಾವು ನಮ್ಮ ಸಮಾಜವನ್ನು ಸಿದ್ಧಗೊಳಿಸಿ ಆಯೋಗಕ್ಕೆ ತಕ್ಕ ಸಮಂಜಸ ಮಾಹಿತಿ ಒದಗಿಸಲು ತುರ್ತಾಗಿ ಸಜ್ಜಾಗಬೇಕಾಗಿದೆ. ಈ ಮಹತ್ತರ ಉದ್ದೇಶದ ಹಿನ್ನೆಲೆಯಿಂದ ಮಾದಿಗ ಸಮಾಜವನ್ನು ಜಾಗೃತಿಗೊಳಿಸಿ, ಒಳಮೀಸಲಾತಿಯನ್ನು ಸರ್ಕಾರ ಅತೀ ಶೀಘ್ರವಾಗಿ ಜಾರಿಗೂಳಿಸಲು ಸನ್ನದ್ಧಗೊಳಿಸುವ ಸಲುವಾಗಿ ಚಾಮರಾಜನಗರ ಗಡಿಜಿಲ್ಲೆಯಿಂದ ಬೀದರ್ ಜಿಲ್ಲೆಯ ಮತ್ತತುದಿಯವರೆಗೂ ಒಳಮೀಸಲಾತಿಯನ್ನು ಪಡೆಯುವ ಸಲುವಾಗಿ ಇದೇ ಡಿಸೆಂಬರ್ 14, 2024ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ರಾಜ್ಯಮಟ್ಟದ ಮಾದಿಗ ವಕೀಲರ ಸÀಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಮಾವೇಶದಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಮಾದಿಗ ಸಮುದಾಯದ ಮುಖಂಡರಾದ ಆರ್.ವಿ.ತಿಮ್ಮಾಪುರ, ಮಾಜಿ ಸಚಿವರಾದ ಹೆಚ್ ಅಂಜನೇಯ, ವಿರೋಧ ಪಕ್ಷವಾದ ಬಿಜೆಪಿಯಿಂದ ಸಂಸದರಾದ ಗೋವಿಂದ ಕಾರಜೋಳ, ಮಾಜಿ ಸಂಸದರಾದ ಎ.ನಾರಾಯಣಸ್ವಾಮಿ ಸೇರಿದಂತೆ ಇತರೆ ಮಾದಿಗ ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ ಎಂದ ಅವರು. ಈ ಸಮಾವೇಶದಲ್ಲಿ ರಾಜ್ಯದ ವಿವಿಧಡೆಗಳಿಂದ ಸುಮಾರು 700ಕ್ಕೂ ಹೆಚ್ಚು ಮಾದಿಗ ಸಮುದಾಯದ ವಕೀಲರು ಭಾಗವಹಿಸಲಿದ್ದಾರೆ.
ಈ ಸಮಾವೇಶದಲ್ಲಿ ತೆಗೆದುಕೊಳ್ಳಲಾಗುವ ನಿರ್ಣಯಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಈಗಾಗಲೇ ಹಲವಾರಿ ಭಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒಳ ಮೀಸಲಾತಿಯನ್ನು ಶೀಘ್ರವಾಗಿ ಜಾರಿ ಮಾಡುವಂತೆ ಒತ್ತಾಯವನ್ನು ಸಹಾ ಮಾಡಲಾಗಿದೆ ಎಂದರು.
ಗೋಷ್ಟಿಯಲ್ಲಿ ನ್ಯಾಯಾವಾದಿಗಳಾದ ಬೀಸನ್ನಹಳ್ಳಿ ಜಯ್ಯಣ್ಣ, ಕುಮಾರ್ ಚಂದ್ರಪ್ಪ, ರಾಜಣ್ಣ, ಸುರೇಶ್, ರಾಮಣ್ಣ, ರಮೇಶ್, ರಾಮಬಾಬು, ಲೋಕೇಶ್, ದಾಸಪ್ಪ, ರಾಜಪ್ಪ, ನರಹರಿ ಸೇರಿದಂತೆ ಇತರರು ಭಾಗವಹಿಸಿದ್ದರು.