ಮಂಗಳೂರು: ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಸ್ವಾಮಿಯ ಮಹಿಮೆಯ ಪ್ರತ್ಯಕ್ಷ್ಯ ದರ್ಶನವಾಗುತ್ತದೆ ಎನ್ನುವ ಹಲವು ಸುದ್ದಿಗಳು ಎಲ್ಲೆಡೆ ಕೇಳಿ ಬರುತ್ತದೆ. ಇದೇ ಕಾರಣಕ್ಕಾಗಿಯೇ ಅಯ್ಯಪ್ಪ ಸ್ವಾಮಿಯ ಪ್ರಮುಖ ಕ್ಷೇತ್ರ ಶಬರಿಮಲೆಗೆ ಭೇಟಿ ನೀಡುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತೆ.
ಇಂತಹುದೇ ಒಂದು ಪವಾಡ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ. ಒಂದು ಶಬ್ದ ಮಾತನಾಡಲೂ ಬಾಯಿ ಬರದ ಬಾಲಕನೊಬ್ಬ ಒಂದು ವರ್ಷದ ಹಿಂದೆ ಶಬರಿಮಲೆ ಏರಿದ್ದ. ಈ ಬಾರಿ ಮತ್ತೆ ಶಬರಿಮಲೆ ಏರಲು ಮಾಲೆ ಹಾಕಿರುವ ಈ ಬಾಲಕ ಇದೀಗ ಮಾತನಾಡಲು ಆರಂಭಿಸಿದ್ದಾನೆ.
ಪುತ್ತೂರಿನ ಸಾಮೆತ್ತಡ್ಕ ನಿವಾಸಿ ಪ್ರಸನ್ನ ಇದೀಗ ಮಾತನಾಡುವ ಮೂಲಕ ಅಯ್ಯಪ್ಪ ಮಾಲಾಧಾರಿಗಳಿಗೆ ಅಚ್ಚರಿ ತಂದಿದ್ದಾರೆ. ಸಣ್ಣ ಮಕ್ಕಳು ಮೊದ ಮೊದಲಿಗೆ ಯಾವ ರೀತಿ ತೊದಲು ಮಾತನಾಡುತ್ತಾರೋ, ಅದೇ ರೀತಿಯಲ್ಲಿ ಈ ಬಾಲಕ ಮಾತನಾಡಲು ಆರಂಭಿಸಿದ್ದಾರೆ.ಒಂದು ಶಬ್ದವನ್ನೂ ಸರಿಯಾಗಿ ಮಾತನಾಡದ ಪುತ್ತೂರು ನಿವಾಸಿ ಪ್ರಸನ್ನ ಎನ್ನುವ ಈ ಬಾಲಕ ಕಳೆದ ವರ್ಷ ಕರುಣಾಮಯಿ ಅಯ್ಯಪ್ಪ ಭಕ್ತವೃಂದ ಪುತ್ತೂರು ಇವರ ತಂಡದಲ್ಲಿ ಅಯ್ಯಪ್ಪ ಮಾಲೆ ಹಾಕಿ, ನಲವತ್ತೆಂಟು ದಿನಗಳ ಕಾಲ ಕಠಿಣ ವೃತಾಚರಣೆ ನಡೆಸಿ ಶಬರಿಮಲೆ ಏರಿದ್ದ. ಸುಮಾರು 48 ಮೈಲು ದುರ್ಗಮ ಕಾಡಿನ ಹಾದಿಯಲ್ಲಿ ಸಾಗಿ ಸ್ವಾಮಿ ದರ್ಶನವನ್ನು ಪಡೆದಿದ್ದ ಈ ಬಾಲಕ ಇದೀಗ ಮಾತನಾಡಲು ಆರಂಭಿಸಿದ್ದಾನೆ.
ಒಂದು ಶಬ್ದ ಮಾತನಾಡಲೂ ಒಂದು ವರ್ಷಗಳ ಹಿಂದೆ ಚಡಪಡಿಸುತ್ತಿದ್ದ ಈ ಬಾಲಕ ಇಂದು ಅಯ್ಯಪ್ಪ ಸ್ವಾಮಿಯ ಶರಣು ಕರೆಯುತ್ತಾನೆ. ಮಾತು ಬಾಯಿಯಿಂದ ಬರುತ್ತಿದ್ದು, ಎಂಟು ಶರಣನ್ನು ಪ್ರಸನ್ನ ಯಾವುದೇ ತೊಂದರೆಯಿಲ್ಲದೆ ಕರೆಯುತ್ತಾರೆ. ಬಳಿಕದ ಶಬ್ದಗಳಲ್ಲಿ ಅಷ್ಟು ಸ್ಪಷ್ಟವಾಗಿಲ್ಲದಿದ್ದರೂ, ಅರ್ಥವಾಗುವಷ್ಟಿದೆ. ಈ ಬಾರಿ ಮತ್ತೆ ಅಯ್ಯಪ್ಪ ಮಾಲೆ ಧರಿಸಿ ಮಲೆ ಏರಲು ಸಿದ್ಧತೆ ನಡೆಸಿದ್ದಾನೆ. ಈ ಬಾರಿ ಮಲೆ ಏರಿದರೆ ಪ್ರಸನ್ನ ಇನ್ನಷ್ಟು ಸ್ಪಷ್ಟವಾಗಿ ಮಾತನಾಡುವ ಸಾಧ್ಯತೆಯಿದೆ ಎನ್ನುವ ನಿರೀಕ್ಷೆಯಲ್ಲಿ ಹಿರಿಯ ಸ್ವಾಮಿಗಳಲ್ಲಿದೆ. ಮೊದಲ ಬಾರಿಗೆ ಮಾಲೆ ಧರಿಸಲು ಬಂದಾಗ ಕೇಳಲು ಮತ್ತು ಮಾತನಾಡಲು ಆಗದ ಸ್ಥಿತಿಯಲ್ಲಿದ್ದ ಪ್ರಸನ್ನನಿಗೆ ಇದೀಗ ಒಂದು ಕಿವಿ ಕೇಳಿಸುತ್ತಿದೆ, ಮಾತನಾಡಲು ಶಬ್ದಗಳು ಹೊರಡುತ್ತಿದೆ.
ಮೊದಲ ಬಾರಿಗೆ ಮಾಲೆ ಹಾಕಲು ಬಂದ ಸಂದರ್ಭದಲ್ಲಿ ಕೈ ಸನ್ನೆಯ ಮೂಲಕ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದ ಪ್ರಸನ್ನ ಬಾಯಲ್ಲಿ ಮಾತನಾಡಲಾರಂಭಿಸಿರುವುದು ಗುರು ಸ್ವಾಮಿಗಳಿಗೆ ಸಂತಸ ತಂದಿದೆ. ಇಂತಹ ಹಲವು ಉದಾಹರಣೆಗಳನ್ನು ಹಿರಿಯ ಅಯ್ಯಪ್ಪ ಮಾಲಾಧಾರಿಗಳು ಉದಾಹರಣೆಯ ಸಹಿತ ನೀಡುತ್ತಾರೆ. ಈ ಸಾಲಿಗೆ ಪ್ರಸನ್ನ ಕೂಡಾ ಸೇರಿದ್ದು, ಅಯ್ಯಪ್ಪನ ಮಹಿಮೆಯಿಂದ ಎಲ್ಲವೂ ಸಾಧ್ಯ ಎನ್ನುವುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ.
ಪುತ್ತೂರಿನ ಮಹಾಲಿಂಗೇಶ್ವರ ಐಟಿಐ ನಲ್ಲಿ ಎರಡನೇ ವರ್ಷದ ಸಿವಿಲ್ ಡಿಪ್ಲೊಮಾ ಮಾಡುತ್ತಿರುವ ಪ್ರಸನ್ನ, ವರ್ಷದ ಹಿಂದೆ ತನಕ ಒಂದು ಶಬ್ದವನ್ನೂ ಮಾತನಾಡಲಾರದ ಸ್ಥಿತಿಯಲ್ಲಿದ್ದ. ಇದೀಗ ಈತನ ಸ್ವಭಾವದಲ್ಲಾದ ಬದಲಾವಣೆ ಆತನ ಮೇಲೆ ಅಯ್ಯಪ್ಪ ಸ್ವಾಮಿ ದಯೆ ತೋರಿದ್ದಾನೆ ಅನ್ನೋದು ಹಿರಿಯ ಅಯ್ಯಪ್ಪ ಮಾಲಾಧಾರಿಗಳ ಅಭಿಪ್ರಾಯವಾಗಿದೆ.