ಬೆಂಗಳೂರು: ಬೆಂಗಳೂರಿನ ಮಾರತ್ತ ಹಳ್ಳಿಯಲ್ಲಿ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪತ್ನಿ, ಆಕೆಯ ತಾಯಿ ಮತ್ತು ಸಹೋದರನನ್ನು ಬೆಂಗಳೂರು ಪೊಲೀಸರು ಭಾನುವಾರ(ಡಿ15) ಬಂಧಿಸಿದ್ದಾರೆ.
34 ವರ್ಷದ ಸಾಫ್ಟ್ವೇರ್ ಇಂಜಿನಿಯರ್ ಅತುಲ್ ಸುಭಾಷ್ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. 24 ಪುಟಗಳ ಡೇತ್ ನೋಟ್ ಮತ್ತು ವೀಡಿಯೊವನ್ನು ಹಂಚಿಕೊಂಡು ತನ್ನ ಪತ್ನಿ ಮತ್ತು ಆಕೆಯ ಕುಟುಂಬದ ಕಿರುಕುಳ ನೀಡಿದ್ದು, ತಾಳಲಾರದೆ ಈ ರೀತಿ ಮಾಡುತ್ತಿದ್ದೇನೆ ಎಂದು ಆರೋಪಿಸಿದ್ದರು.
ಸುಭಾಷ್ ಅವರ ಪತ್ನಿ ನಿಖಿತಾ ಸಿಂಘಾನಿಯಾ ಅವರನ್ನು ಗುರುಗ್ರಾಮ್ನಲ್ಲಿ ಬಂಧಿಸಲಾಗಿದ್ದು, ಆಕೆಯ ತಾಯಿ ನಿಶಾ ಸಿಂಘಾನಿಯಾ ಮತ್ತು ಸಹೋದರ ಅನುರಾಗ್ ಸಿಂಘಾನಿಯಾ ಅವರನ್ನು ಪ್ರಯಾಗ್ರಾಜ್ನಲ್ಲಿ ಬಂಧಿಸಲಾಗಿದೆ. ಬೆಂಗಳೂರು ನಗರ ಪೊಲೀಸರು ನಿಕಿತಾ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿದ ನಂತರ ಬಂಧಿಸಲಾಗಿದೆ.
ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು
ಅತುಲ್ ಸುಭಾಷ್ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಸುಭಾಷ್ ವಿಚ್ಛೇದಿತ ಪತ್ನಿ ನಿಖಿತಾ ಸಿಂಘಾನಿಯಾ ಮತ್ತವರ ಕುಟುಂಬ ಶನಿವಾರ ಅಲಹಾಬಾದ್ ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ನಿಖಿತಾ ಸಿಂಘಾನಿಯಾ ಜತೆಗೆ ಅವರ ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಮತ್ತು ಚಿಕ್ಕಪ್ಪ ಸುಶೀಲ್ ಸಿಂಘಾನಿಯಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಶುಕ್ರವಾರವಷ್ಟೇ ಬೆಂಗಳೂರು ಪೊಲೀಸರು ನಿಖಿತಾ ವಿರುದ್ಧ ಸಮನ್ಸ್ ಜಾರಿಗೊಳಿಸಿ, ಸೋಮ ವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು