ಉಡುಪಿ: ಉಡುಪಿಯ ಖ್ಯಾತ ಮಧುಮೇಹ ತಜ್ಞೆ ಡಾ. ಶೃತಿ ಬಲ್ಲಾಳ್ ಅವರು ಫಿಲಿಫೈನ್ಸ್ನ ಮನಿಲಾದಲ್ಲಿ ನಡೆದ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರತಿಷ್ಠಿತ ಮಿಸೆಸ್ ಅರ್ಥ್ ಇಂಟರ್ನ್ಯಾಶನಲ್ ಟೂರಿಸಂ – 2024 ಕಿರೀಟ ಗೆದ್ದುಕೊಂಡಿದ್ದಾರೆ. ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಶೃತಿ ಸ್ವತಃ ತಮ್ಮ ಅನುಭವ ಹಂಚಿಕೊಂಡರು.
ಮಂಗಳೂರಿನ ಪಾತ್ವೇ ಎಂಟರ್ಪ್ರೈಸಸ್ನಿಂದ ಸೌಂದರ್ಯ ಸ್ಪರ್ಧೆಗೆ ತಾವು ಕಾಲಿಟ್ಟಿದ್ದು, ಮಂಗಳೂರು ವಲಯ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿಯನ್ನು ಗೆದ್ದುಕೊಂಡೆ. ನಂತರ ಬೆಂಗಳೂರಿನಲ್ಲಿ ಆಗಸ್ಟ್ ತಿಂಗಳಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಮಿಸೆಸ್ ಇಂಡಿಯಾ ಅರ್ತ್ ಇಂಟರ್ನ್ಯಾಶನಲ್ ಪ್ರಶಸ್ತಿಯನ್ನು ಗೆದ್ದು, ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾದೆ.
ಆ ಬಳಿಕ ಮನಿಲಾದಲ್ಲಿ ನಡೆದ ಅಂತರಾಷ್ಟ್ರೀಯ ಸ್ಪರ್ಧೆಯು ಬಹಳ ಸವಾಲಿನದ್ದಾಗಿತ್ತು. ಇಲ್ಲಿ 10 ದಿನಗಳ ಕಾಲ ನಡೆದ ಸೌಂದರ್ಯದ ಜೊತೆಗೆ ಬುದ್ದಿಮತ್ತೆ, ದಯೆ, ಪರಿಸರದ ಬಗ್ಗೆ ತೋರಿದ ಬದ್ದತೆಯು ಜ್ಯೂರಿಗಳ ಗಮನ ಸೆಳೆದು ಈ ಪ್ರಶಸ್ತಿಯನ್ನು ಗೆದ್ದುಕೊಂಡೆ ಎಂದರು.
ಈ ಪ್ರಶಸ್ತಿಯೊಂದಿಗೆ ತನ್ನನ್ನು 5 ದೇಶಗಳಲ್ಲಿ ಪರಿಸರದ ಬಗ್ಗೆ ಜಾಗೃತಿಗಾಗಿ ಕೆಲಸ ಮಾಡಲು ಆಯ್ಕೆ ಮಾಡಲಾಗಿದೆ ಎಂದವರು ಸಂತಸ ವ್ಯಕ್ತಪಡಿಸಿದರು.ಈ ಅಂತರಾಷ್ಟ್ರೀಯ ಸ್ಪರ್ಧೆಗೆ ತನ್ನನ್ನು ಆಸ್ಟ್ರಲ್ ಮಿಸೆಸ್ ಇಂಡಿಯಾದ ಕರ್ನಾಟಕ ನಿರ್ದೇಶಕಿ ಪ್ರತಿಭಾ ಸೌನ್ಶಿಮಠ್ ಅವರು ಮಾರ್ಗದರ್ಶನ ಮಾಡಿದ್ದರು ಎಂದು ಕೃತಜ್ಞತೆ ಸಲ್ಲಿಸಿದರು.