ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿದೆ. ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಕೂಡ ಮುನ್ನೆಲೆಗೆ ಬಂದಿದೆ. ಇನ್ನು ಹೊಸ ವರ್ಷ ಆರಂಭವಾಗುತ್ತಿದ್ದಂತೆ ಹೊಸ ರಾಜ್ಯಾಧ್ಯಕ್ಷರ ಆಯ್ಕೆ ಆಗಲಿದೆ ಎಂದು ಬಿಜೆಪಿ ನಾಯಕ ಭವಿಷ್ಯ ನುಡಿದಿದ್ದಾರೆ.
ಹೌದು, ಜನವರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾಗುವ ನಿರೀಕ್ಷೆ ಇದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದರಿಂದ ಬಿಜೆಪಿ ರಾಷ್ಟ್ರಾಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಹುದು. ಈ ಹಿನ್ನೆಲೆ ಬಿಜೆಪಿ ರಾಷ್ಟ್ರಾಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರ ಸ್ಥಾನಗಳು ಖಾಲಿಯಾಗಲಿವೆ. ಅಲ್ಲದೆ ನಾನು ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದೂ ಕುಮಾರ್ ಬಂಗಾರಪ್ಪ ಇಂಗಿತ ಹೊರಹಾಕಿದ್ದಾರೆ.
ಕರ್ನಾಟಕ ಬಿಜೆಪಿಯಲ್ಲಿನ ಭಿನ್ನಮತವನ್ನು ಬಿಜೆಪಿ ಕೈಕಮಾಂಡ್ ಗಮನಿಸಿದೆ. ಹಾಗಾಗಿ ಈ ವಿಚಾರದಲ್ಲಿ ಹೈಕಮಾಂಡ್ ಸ್ಪಷ್ಟ ನಿಲುವು ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ನಾನು ಕಳೆದ 30 ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ ಎಂದಿದ್ದಾರೆ.
ಕಾಂಗ್ರೆಸ್ ಅಹಿಂದ ಸಂಘಟನೆಯಾಗಿದೆ. ಅದಕ್ಕೆ ವಿರುದ್ಧವಾಗಿ ಬಿಜೆಪಿ ಕೂಡ ಒಬಿಸಿ ಸಮುದಾಯದ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಹಾಗಾಗಿ ಬಿಜೆಪಿಯು ಒಬಿಸಿ ನಾಯಕರಿಗೆ ಆದ್ಯತೆ ಕೊಡಬೇಕು. ಒಂದು ವೇಳೆ ಏನಾದರೂ ಒಬಿಸಿ ಸಮುದಾಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡುವುದಾದರೆ, ನನ್ನ ಹೆಸರನ್ನೇ ಪರಿಗಣಿಸಿ ಎಂದು ಹೇಳಿದ್ದೇನೆ. ಹಾಗಾಗಿ ಬರುವ ಜನವರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾಗುವ ಸಾಧ್ಯತೆ ಇದೆ. ಮುಂದೆ ಏನಾಗುತ್ತೋ ಕಾದು ನೋಡಬೇಕು ಎಂದಿದ್ದಾರೆ.
ವಿಜಯೇಂದ್ರ ಹೇಳಿದ್ದೇನು?: ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶ ಇಲ್ಲವೇ ಇಲ್ಲ. ಬಣದ ಹೆಸರಿನಲ್ಲಿ ಸಭೆಗಳನ್ನು ಆಯೋಜಿಸುವುದನ್ನು ಒಪ್ಪವುದಿಲ್ಲ. ಈ ನಿಟ್ಟಿನಲ್ಲಿ ಸಭೆ, ಸಮಾವೇಶಗಳನ್ನು ಮಾಡಲು ಯಾರೇ ಹೊರಟಿದ್ದರೂ ಕೂಡಲೇ ತಮ್ಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕೆಂದು ವಿನಂತಿಸುವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ನಾನು ರಾಜ್ಯಾಧ್ಯಕ್ಷನಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಗೆ ಇನ್ನಷ್ಟು ಬಲ ತುಂಬುವ ಕಾರ್ಯಕ್ರಮದಡಿಯಲ್ಲಿ ಪಕ್ಷದ ಹಿರಿಯರು, ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ಎಲ್ಲ ಹಿರಿಯರೊಂದಿಗೆ ಅತೀ ಶೀಘ್ರದಲ್ಲೇ ಸಭೆ ಕರೆಯಲಿದ್ದೇನೆ ಎಂದಿದ್ದಾರೆ.