ಚಿತ್ರದುರ್ಗ : ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಿ.ಐ.ಟಿ.ಯು.ವತಿಯಿಂದ ಜಿಲ್ಲಾ ಪಂಚಾಯಿತಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಭಾರತಿ ಆರ್.ಬಣಕಾರ್ರವರ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾ ಪಂಚಾಯಿತಿಗೆ ತೆರಳಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಡಿ.ಎಂ.ಮಲಿಯಪ್ಪ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ವರ್ಗ-3 ಮತ್ತು 4 ಎಂದು ಪರಿಗಣಿಸಿ ಸೇವೆ ಖಾಯಂಗೊಳಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರಿಗೆ 2018 ರಿಂದ ಕೇಂದ್ರ ಸರ್ಕಾರ ಗೌರವ ಧನ ಹೆಚ್ಚಳ ಮಾಡಿಲ್ಲ. ಯಾವುದೇ ಜೀವನ ಭದ್ರತೆಯಿಲ್ಲದೆ ದುಡಿಯುತ್ತಿದ್ದಾರೆ. ಮಾಸಿಕ ಗೌರವ ಧನ 26 ಸಾವಿರ ರೂ.ಗಳಿಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಘೋಷಿಸಿದಂತೆ ಹದಿನೈದು ಸಾವಿರ ರೂ.ಗಳಿಗೆ ಗೌರವ ಧನ ಹೆಚ್ಚಿಸಬೇಕು. ನಿವೃತ್ತಿಯಾದವರಿಗೆ ಇಡಿಗಂಟು ಮಾಸಿಕ ಹತ್ತು ಸಾವಿರ ರೂ.ಪಿಂಚಣಿ ನೀಡಬೇಕು. ಶಿಕ್ಷಣ ಇಲಾಖೆ ಎಸ್.ಡಿ.ಎಂ.ಸಿ.ಗಳಿಂದ ಪ್ರಾರಂಭಿಸಿರುವ ಎಲ್.ಕೆ.ಜಿ. ಯು.ಕೆ.ಜಿ. ನಿಲ್ಲಿಸಿ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ. ಯು.ಕೆ.ಜಿ. ತೆರೆಯಬೇಕು. ಐ.ಸಿ.ಡಿ.ಎಸ್.ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ಬೇಕು. ಮೂರನೆ ಬಾರಿಗೆ ದೇಶದ ಪ್ರಧಾನಿಯಾಗಿರುವ ನರೇಂದ್ರಮೋದಿಗೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಬಿಸಿಯೂಟ, ಆಶಾ ಕಾರ್ಯಕರ್ತೆಯರ ಕಷ್ಟ ಗೊತ್ತಾಗುವುದಿಲ್ಲ. ಅವರೇನಿದ್ದರೂ ಅದಾನಿ, ಅಂಬಾನಿ ಪರವಾಗಿದ್ದಾರೆ. ಉದ್ಯಮಿಗಳಿಗೆ ಲಕ್ಷಾಂತರ ಕೋಟಿ ರೂ.ಗಳ ಸಾಲ ಮನ್ನ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಸಿ.ಐ.ಟಿ.ಯು. ಸಹ ಸಂಚಾಲಕ ಸಿ.ಕೆ.ಗೌಸ್ಪೀರ್ ಮಾತನಾಡಿ ಹಲವಾರು ವರ್ಷಗಳಿಂದಲೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಮ್ಮ ಬೇಡಿಕೆಗಳಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಅಂಗನವಾಡಿ ಕೇಂದ್ರಗಳಿಗೆ ಕೊಡುವ ಪೌಷ್ಟಿಕಾಂಶ ಆಹಾರಕ್ಕೆ ಜಿ.ಎಸ್.ಟಿ. ವಿಧಿಸಬಾರದು. ಘಟಕ ವೆಚ್ಚ ಹೆಚ್ಚಳ ಮಾಡಿ ಮೊದಲಿನಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೆನು ಅಂತಿಮಗೊಳಿಸುವ ವ್ಯವಸ್ಥೆಯಾಗಬೇಕು. ಮೂರು ತಿಂಗಳೊಳಗೆ ಖಾಲಿ ಹುದ್ದೆಗಳನ್ನು ನೇಮಿಸಬೇಕು. ಇಲ್ಲವಾದಲ್ಲಿ ಅಧಿಕಾವದಿ ವೇತನ ನೀಡಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಕೇಂದ್ರಗಳನ್ನಾಗಿ ಪರಿವರ್ತಿಸುವತನಕ ಸಹಾಯಕಿಯರ ನೇಮಕವಾಗಬೇಕು. ಮುಂಗಡವಾಗಿ ಕರೆನ್ಸಿ ಹಣ, ಕೋಳಿ ಮೊಟ್ಟೆ, ಬಾಡಿಗೆ, ಅಡುಗೆ ಅನಿಲ, ತರಕಾರಿ, ಕಾಂಟೆಜೆನ್ಸಿ ಬಿಲ್ಗಳನ್ನು ಹಾಕದೆ ಫಲಿತಾಂಶ ಕೇಳಬಾರದೆಂದು ಆಗ್ರಹಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಮೊಬೈಲ್ನಲ್ಲಿ ದಾಖಲೆ ನಿರ್ವಹಿಸುತ್ತಿರುವುದರಿಂದ ದಾಖಲಾತಿ ಬರೆಸುವ ಸಂಖ್ಯೆ ಕಡಿಮೆ ಮಾಡುವಂತೆ ಮನವಿ ಮಾಡಿದರು.
ಇಂದಿರಮ್ಮ, ಜೆ.ಎನ್.ಗಂಗಮ್ಮ, ಬಿ.ಬೋರಮ್ಮ, ನಿರ್ಮಲ, ಆಶಾರಾಣಿ, ಮಂಜುಳ, ಕಮಲ, ಎಸ್.ಕಲ್ಯಾಣಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
				
															
                    
                    
                    
                    
                    
































