ಚಿತ್ರದುರ್ಗ: ಇಂದಿನ ಒತ್ತಡದ ಜೀವನಶೈಲಿಯಲ್ಲಿ ಆಯುಷ್ ಚಿಕಿತ್ಸಾ ಪದ್ಧತಿಗಳು ಎಂದಿಗಿಂತ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಜಿಲ್ಲಾ ನ್ಯಾಯಾಧೀಶರಾದ ರೋಣ ವಾಸುದೇವ್ ಹೇಳಿದರು.
ನಗರದ ಜಿಲ್ಲಾ ವಕೀಲರ ಭವನದಲ್ಲಿ ಬುಧವಾರ ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆಯುಷ್ ಆರೋಗ್ಯ ಚಿಕಿತ್ಸಾ ಶಿಬಿರಯನ್ನು ಔಷಧಿ ಸಸ್ಯಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಆಯುಷ್ ಇಲಾಖೆಯ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರದ ಪೂರ್ಣ ಪ್ರಯೋಜನವನ್ನು ನ್ಯಾಯಾಧೀಶರು, ನ್ಯಾಯಾಂಗ ಇಲಾಖೆ ಸಿಬ್ಬಂದಿ ಹಾಗೂ ವಕೀಲರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಆಯುಷ್ ವೈದ್ಯಾಧಿಕಾರಿ ಟಿ.ಶಿವಕುಮಾರ್ ಮಾತನಾಡಿ, ಉಚಿತ ಆಯುಷ್ ಶಿಬಿರ ಎರಡು ಹಂತಗಳಲ್ಲಿ ನಡೆಯುತ್ತಿದ್ದು, ಮೊದಲನೇ ಹಂತದಲ್ಲಿ ಇಂದು ಆರೋಗ್ಯ ತಪಾಸಣೆ ಮಾಡಿ ಎಲ್ಲಾ ಕಾಯಿಲೆಗಳಿಗೂ ಉಚಿತ ತಪಾಸಣೆ ಹಾಗೂ ಔಷಧಿಯನ್ನು ಆಯುಷ್ ತಜ್ಞರು ನೀಡುತ್ತಾರೆ. ಒಂದು ತಿಂಗಳ ನಂತರ ಇದರ ಮುಂದುವರೆದ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿ ಗಂಗಾಧರ್ ಸೇರಿದಂತೆ ನ್ಯಾಯಾಧೀಶರು, ನ್ಯಾಯಾಂಗ ಇಲಾಖೆ ಸಿಬ್ಬಂದಿ, ವಕೀಲರು, ಸಾರ್ವಜನಿಕರು ಇದ್ದರು. ಮಹಾಲಕ್ಷ್ಮೀ ಪ್ರಾರ್ಥಿಸಿದರು. ಡಾ.ನಾಗರಾಜ್ ನಾಯಕ್ ವಂದಿಸಿದರು.