ಬೆಳಗಾವಿ : ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ವೇಳೆ ವಿಧಾನ ಪರಿಷತ್ತಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ವೇ ಎಂಬ ಬಳಕೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲಿಯೇ ಪರಿಶೀಲನೆ ಕಾರ್ಯ ನಡೆಯುತ್ತಿರುವ ನಡುವೆಯೇ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆಂಬಲಿಗರು ಸಿ.ಟಿ. ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಈ ಕುರಿತು ಪೊಲೀಸರು 15 ಜನರನ್ನು ಅರೆಸ್ಟ್ ಮಾಡಿದ್ದಾರೆ.
ಇಂದು ಸುವರ್ಣಸೌಧಕ್ಕೆ ಕಾರಿನಲ್ಲಿ ಆಗಮಿಸಿದ ಎಂಎಲ್ಸಿ ಸಿ.ಟಿ. ರವಿ ಅವರು ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ಏಕಾಏಕಿ ರವಿ ಅವರ ಕಾರಿನತ್ತ ನುಗ್ಗಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ. ರವಿ ಕಾರು ಮುತ್ತಿಗೆ ಹಾಕಿದ ಕಾರ್ಯಕರ್ತರು ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ಹಿಡಿದು ಹಿಂದಕ್ಕೆ ತಳ್ಳಿದ್ದಾರೆ.
ಈ ವೇಳೆ ಸುಮಾರು 15ರ ಜನರು ಗುಂಪುಗೂಡಿ ಸಿ.ಟಿ. ರವಿ ಅವರ ಕಾರಿಗೆ ಗುದ್ದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೋರಾದ ಗಲಾಟೆ ಶುರುವಾಗುತ್ತಿದ್ದಂತೆ ಪೊಲೀಸರ ಭದ್ರತೆಯಲ್ಲಿ ಸಿ.ಟಿ. ರವಿ ಅವರು ಪರಿಷತ್ತಿನ ಕೋಣೆಯ ಆವರಣದೊಳಗೆ ಹೋಗಿದ್ದಾರೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಹಿಂಬಾಲಿಸಿಕೊಂಡು ಹೋಗುವುದನ್ನು ಪೊಲೀಸರು ತಡೆದಿದ್ದಾರೆ. ಮುಂದುವರೆದು ಪೊಲೀಸರು ಸಿ.ಟಿ. ರವಿ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಸುಮಾರು 15 ಜನರನ್ನು ಬಂಧಿಸಿದ್ದಾರೆ.